ನವದೆಹಲಿ : ತನ್ನ ಎಡವಟ್ಟು ನಿರ್ಧಾರಗಳಿಂದ ದೇಶದ ಜನರಿಗೆ ವ್ಯಾಕ್ಸಿನ್ ನೀಡುವ ಮಹತ್ವದ ಕಾರ್ಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಬೇಡಿಕೆ ಪ್ರಮಾಣದಷ್ಟು ವ್ಯಾಕ್ಸಿನ್ ಕೇಂದ್ರ ಸರ್ಕಾರದಿಂದ ಪೂರೈಕೆಯಾಗದ ಹಿನ್ನಲೆ 7 ರಾಜ್ಯಗಳು ಜಾಗತಿಕ ಟೆಂಡರ್ ಕರೆಯಲು ಮುಂದಾಗಿವೆ.
ಮೇ 1 ರ ಬಳಿಕ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ತೀವ್ರ ಪ್ರಮಾಣದ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು ಈ ಹಿನ್ನಲೆಯಲ್ಲಿ ದೆಹಲಿ, ತೆಲಂಗಾಣ, ಆಂಧ್ರಪ್ರದೇಶದ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, ಉತ್ತರಪ್ರದೇಶ ಲಸಿಕೆಗಾಗಿ ಗೊಬ್ಲಲ್ ಟೆಂಡರ್ ಕರೆಯುವುದಾಗಿ ಘೋಷಿಸಿವೆ.
ಭಾರತದಲ್ಲಿ ತೀವ್ರ ವ್ಯಾಕ್ಸಿನ್ ಕೊರತೆ ನಡುವೆಯೂ ಕೇಂದ್ರ ಸರ್ಕಾರ ಮೇ 1 ರಿಂದ ಮೂರನೇ ಹಂತದ ವ್ಯಾಕ್ಸಿನ್ ಅಭಿಯಾನ ಶುರು ಮಾಡಿದ ಎಡವಟ್ಟು ನಿರ್ಧಾರದಿಂದ ಈ ಸಮಸ್ಯೆ ಸೃಷ್ಟಿಯಾಗಿದ್ದು, 18 ವರ್ಷ ಮೇಲ್ಪಟ್ಟ ಜನರು ಲಸಿಕೆ ಪಡೆಯಲು ಆರಂಭಿಸಿದ ಬಳಿಕ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾ ಅಭಾವ ಆರಂಭವಾಗಿದೆ.

ವ್ಯಾಕ್ಸಿನ್ ಕೊರತೆಯ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂಗಳ ವಿಡಿಯೋ ಕಾನ್ಫರೆನ್ಸ್ ಸಭೆ ಸೇರಿದಂತೆ ಪತ್ರದ ಮೂಲಕ ಹಲವು ಬಾರಿ ಮನವಿ ಮಾಡಿಕೊಂಡಿವೆ. ಈ ಒತ್ತಡದ ಬಳಿಕ ಸರ್ಕಾರ ಕೇವಲ 45 ವರ್ಷದ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಕೇಂದ್ರ ವ್ಯಾಕ್ಸಿನ್ ನೀಡಲಿದ್ದು ಬಾಕಿ ಪ್ರಮಾಣದ ಲಸಿಕೆಯನ್ನು ರಾಜ್ಯ ಸರ್ಕಾರವೇ ಖರೀದಿ ಮಾಡಬೇಕು ಎಂದು ಸೂಚನೆ ನೀಡಿತ್ತು.
ಕೇಂದ್ರ ಸರ್ಕಾರದ ಸೂಚನೆ ಬಳಿಕ ಎಲ್ಲ ರಾಜ್ಯಗಳು ಲಸಿಕಾ ಉತ್ಪಾದನಾ ಸಂಸ್ಥೆಗಳಾದ ಸೆರಮ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗೆ ನೂರಾರು ಮನವಿ ಮಾಡಿದರೂ ವ್ಯಾಕ್ಸಿನ್ ಉತ್ಪಾದನೆ ಹೆಚ್ಚುತ್ತಿಲ್ಲ ಇದರಿಂದ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಮುಂದುವರಿದ್ದು ಮತ್ತೊಂದೆಡೆ ಕೇಂದ್ರದಿಂದ ಬರಬೇಕಿದ್ದ ಲಸಿಕೆ ಕೂಡಾ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ ಹೀಗಾಗಿ ಒತ್ತಡಕ್ಕೆ ಸಿಲುಕಿರುವ ರಾಜ್ಯಗಳು ಹಲವೆಡೆ ಲಸಿಕೆ ಅಭಿಯಾನ ನಿಲ್ಲಿಸುವ ಅನಿವಾರ್ಯತೆಗೆ ಬಂದಿವೆ.

ಈ ನಡುವೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ವ್ಯಾಕ್ಸಿನ್ ಕೊರತೆ ಹಿನ್ನಲೆ ಕೇವಲ ಎರಡನೇ ಡೋಸ್ ಮಾತ್ರ ನೀಡಬೇಕು, ಮುಂದಿನ ಹದಿನೈದು ದಿನಗಳ ಕಾಲ ಮೊದಲ ಡೋಸ್ ನೀಡದಂತೆ ಹೇಳಿದೆ.
ವ್ಯಾಕ್ಸಿನೇಷನ್ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಭಾರತದಲ್ಲಿ ಸುಮಾರು 16 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಗಿದೆ. ವ್ಯಾಕ್ಸಿನ್‌ಗಾಗಿ ಬಜೆಟ್ ನಲ್ಲಿ 35 ಸಾವಿರ ಕೋಟಿ ಮೀಸಲಿಟ್ಟಿರುವ ಮೋದಿ ಸರ್ಕಾರ ಸುಮಾರು 35 ಕೋಟಿ ಡೋಸ್ ಖರೀದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದೆ. 35 ಕೋಟಿ ಈ ಪೈಕಿ ಈಗಾಗಲೇ 6.5 ಕೋಟಿಯಷ್ಟು ಡೋಸ್ ರಪ್ತು ಮಾಡಿದೆ. ಭಾರತದಲ್ಲಿ ವ್ಯಾಕ್ಸಿನ್ ಕೊರತೆ ನಡುವೆ ರಪ್ತು ಮಾಡಿದ ಪರಿಣಾಮ ಇಂದು ಹಲವು ರಾಜ್ಯಗಳು ವ್ಯಾಕ್ಸಿನ್ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.