ವಾಷಿಂಗ್ಟನ್ : ವಯಸ್ಕರಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ವೈರಸ್ ನಿಗ್ರಹ ಫಿಜರ್ ಲಸಿಕೆಯನ್ನು ಮಕ್ಕಳಿಗೂ ನೀಡಲು ಅಮೇರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ಅನುಮತಿ ನೀಡಿದೆ.
ಅಮೇರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ಮಹತ್ವದ ನಿರ್ಧಾರದಿಂದ 12 ವರ್ಷ ಮೇಲ್ಪಟ್ಟ ಮಕ್ಕಳು ಕೊರೊನಾ ಲಸಿಕೆ ಪಡೆಯಲು ಅರ್ಹರಾಗಲಿದ್ದಾರೆ.
ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆಗಳಿರುವ ಹಿನ್ನಲೆ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ. ಅಮೇರಿಕಾಕ್ಕೂ ಮುನ್ನ ಫೀಜರ್ ಲಸಿಕೆಯನ್ನು ಮಕ್ಕಳಿಗೆ ನೀಡಲು ಕೆನಡಾ ಅನುಮತಿ ನೀಡಿತ್ತು.

12ರಿಂದ 15 ವರ್ಷದ ನಡುವಿನ ಸುಮಾರು 2000 ಸ್ವಯಂಸೇವಕರ ಮೇಲೆ ಫೀಜರ್ ಪ್ರಯೋಗ ನಡೆಸಿತ್ತು. ಅಧ್ಯಯನದಲ್ಲಿ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗಿರುವುದು ಪತ್ತೆಯಾಗಿದೆ ಎಂದು ಫೀಜರ್ ಹೇಳಿಕೊಂಡಿದೆ.
ವ್ಯಾಕ್ಸಿನ್ ಪಡೆದ ಬಳಿಕ ಮಕ್ಕಳಲ್ಲಿ ತೋಳಿನಲ್ಲಿ ನೋವು, ಶೀತ ಮತ್ತು ಜ್ವರದಂತೆ ಸಣ್ಣಪ್ರಮಾಣದ ಅಡ್ಡ ಪರಿಣಾಮ ಕಂಡು ಬರಲಿದೆ ಎಂದು ತಿಳಿದುಬಂದಿದೆ. ಅಮೇರಿಕಾ, ಕೆನಡಾದಲ್ಲಿ ಪ್ರಯೋಗಗಳು ಯಶಸ್ವಿಯಾಗಿರುವ ಹಿನ್ನಲೆ ಭಾರತದಲ್ಲೂ ಪ್ರಯೋಗಗಳಿಗೆ ವೇಗ ಸಿಗಲಿದೆ.