ಬೆಂಗಳೂರು : ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಘೋಷಣೆಯಾಗಿದ್ದು ಲಾಕ್ಡೌನ್ ಅವಧಿಯಲ್ಲಿ ಯಾವುದೇ ರೀತಿಯ ವಿಶೇಷ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ನಗರದ ಪ್ರದಕ್ಷಿಣೆಗೂ ಮುನ್ನ ಮಾತನಾಡಿದ ಅವರು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದಿಲ್ಲ, ಕೊರೊನಾ ಕಂಟ್ರೋಲ್ ಮಾಡುವುದು ಸರ್ಕಾರದ ಮೊದಲ ಗುರಿ ಎಂದು ಹೇಳಿದ್ದಾರೆ.
ಸದ್ಯ ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಉಪಹಾರ, ಊಟ ನೀಡಲು ತಿರ್ಮಾನಿದ್ದು, ಕೇಂದ್ರದ 5ಕೆಜಿ ಅಕ್ಕಿಯ ಜೊತೆಗೆ ರಾಜ್ಯದ 5 ಕೆಜಿ ಅಕ್ಕಿ ಸೇರಿ ಒಟ್ಟು 10 ಕೆಜಿ ಅಕ್ಕಿ ಮತ್ತು ಎರಡು ಕೆಜಿ ಗೋಧಿ ಪಡಿತರದಲ್ಲಿ ನೀಡಲು ಮಾತ್ರ ಆದೇಶಿಸಿದೆ.
ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಹಿನ್ನಲೆ, ಸರ್ಕಾರ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್‍ಗಳನ್ನು ನೀಡಬೇಕು. ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ ₹10,000 ನೀಡಬೇಕು. ನಂತರ ತಿಂಗಳಿಗೆ ₹6,000 ನೀಡಬೇಕು, ಕಾರ್ಮಿಕರಿಗೆ, ಡ್ರೈವರುಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ ₹10,000, ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜನ್ನು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.