ಬೆಡ್ ಕೇಳಿದ್ರೆ ಸಿಎಂಗೆ ಫೋನ್ ಮಾಡೆಂದ ಮಾಧುಸ್ವಾಮಿ
ಕೊರೊನಾ ಸಂಕಷ್ಟದಲ್ಲಿ ಆಹಾರ ಸಚಿವರ ಅಪಹಾಸ್ಯ
ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ಬಿಜೆಪಿ ಶಾಸಕರು ಪಕ್ಷದ ವಿರುದ್ಧವೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇತ್ತ ಸಂಸದ ಪ್ರತಾಪ್ ಸಿಂಹ, ಆಕ್ಸಿಜನ್ ಹಂಚಿಕೆ ಬಗ್ಗೆ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕಿದೆ ಎಂದು ಪರೋಕ್ಷವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಇತ್ತ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಎರಡು ವರ್ಷದಿಂದ ಅಧಿವೇಶನ ನಡೆಯದೇ ಖಾಲಿ ಇರೋ ಸುವರ್ಣ ಸೌಧವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಿಸಿ ಎಂದು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಸುರಪುರ ಶಾಸಕ ರಾಜೂಗೌಡ, ಸರ್ಕಾರ ಮಾರ್ಗಸೂಚಿಯನ್ನ ಕಾಮಿಡ್ ಲಾಕ್‍ಡೌನ್ ಅಂತ ಹೇಳಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ. ಅವರ ಪಿಎ ಫೋನ್ ರಿಸೀವ್ ಮಾಡ್ತಾರೆ. ಯಾರಿಗೂ ಕಲ್ಯಾಣ ಕರ್ನಾಟಕದ ಕಾಳಜಿ ಬೇಕಿಲ್ಲ ಎಂದು ಪಕ್ಷದ ವಿರುದ್ಧವೇ ರಾಜೂಗೌಡ ಗುಡುಗಿದ್ದಾರೆ.

ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುತ್ತಿಲ್ಲ. ಆದ್ರೂ ಮಂಡ್ಯ, ಚಾಮರಾಜನಗರಕ್ಕೆ ಆಕ್ಸಿಜನ್ ನೀಡುವಂತೆ ಒತ್ತಡ ಬರುತ್ತಿವೆ ಎಂದು ಪರೋಕ್ಷವಾಗಿ ಸಚಿವರಾದ ನಾರಾಯಾಣಗೌಡ ಮತ್ತು ಸುರೇಶ್ ಕುಮಾರ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಸಚಿವ ಮಾಧುಸ್ವಾಮಿ ಅವರಿಗೆ ಬೆಡ್ ಕೇಳಿದ್ರೆ ಸಿಎಂಗೆ ಫೋನ್ ಮಾಡಿ ಅಂತ ಉಡಾಫೆ ಮಾತುಗಳನ್ನಾಡುತ್ತಾರೆ.

ಆಹಾರ ಸಚಿವ ಉಮೇಶ್ ಕತ್ತಿ, ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವ ಮಾತುಗಳನ್ನಾಡುವ ಬದಲು ಅಪಹಾಸ್ಯ ಮಾಡುತ್ತಿದ್ದಾರೆ. ಧೈರ್ಯವನ್ನ ಪಂಪ್ ಮಾಡೋಕೆ ಆಗುತ್ತಾ ಅಂತ ಲೇವಡಿ ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಬಯಲು ಮಾಡಿರೋ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಹೆಸರು ಕೇಳಿ ಬಂದಿದೆ. ಒಟ್ಟಿನಲ್ಲಿ ಕೊರೊನಾ ಸಂಕಷ್ಟದಲ್ಲಿ ರಾಜ್ಯದ ಜನತೆ ನೆರವಿಗೆ ಬರಬೇಕಿದ್ದ ಸರ್ಕಾರದ ಜನಪ್ರತಿನಿಧಿಗಳು ಒಬ್ಬರ ಮೇಲೆ ಕೆಸರು ಎರಚಾಟ ಮಾಡಿಕೊಳ್ಳುತ್ತಿರೋದು ವಿಪರ್ಯಾಸ.