ಬೆಂಗಳೂರು : ನಗರದ ಕೊವೀಡ್ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ಮತ್ತೆ ಮೂವರು ಆರೋಪಿಗಳ ಬಂಧಿಸಿದ್ದಾರೆ. ಶಶಿಧರ್, ವೆಂಕೋಬರಾವ್, ವೆಂಕಟೇಶ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೆಂಗಳೂರಿನ ಮೂವರು ಶಾಸಕರು ನಡೆಸಿದ ಸುದ್ದಿಗೋಷ್ಟಿ ಬಳಿಕ ಪ್ರಕರಣ ಸಿಸಿಬಿ ವರ್ಗಾವಣೆಯಾಗಿದ್ದು ಮೇ 4 ರಂದು ಜಯನಗರ ಪೊಲೀಸ್ ಠಾಣೆ ಪೊಲೀಸರು ರೋಹಿತ್, ಅಮಿತ್ ಮತ್ತು ನೇತ್ರಾ ಹೆಸರಿನ ಆರೋಪಿಗಳನ್ನು ಬಂಧಿಸಿದ್ದರು.

ಬೆಡ್ ಬ್ಲ್ಯಾಕಿಂಗ್ ಬಗ್ಗೆ ತನಿಖೆ ಆಳಕ್ಕೆ ಇಳಿದಿರುವ ಸಿಸಿಬಿ ಪೊಲೀಸರು ಅನುಮಾನಸ್ಪಾದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಕೊರೊನಾದಿಂದ ಸಾವನ್ನಪ್ಪಿದ ರೋಗಿಗಳ ಬಿಯು ನಂಬರ್ ಪಡೆದು ಬೆಡ್ ಬ್ಲ್ಯಾಕಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.
ಈ ದಂಡೆಯಲ್ಲಿ ನಗರದ ಕೆಲ ಪ್ರತಿಷ್ಠಿತ ಆಸ್ಪತ್ರೆ ಸಿಬ್ಬಂದಿ ಗಳು, ವೈದ್ಯರು ಭಾಗಿಯಾಗಿದ್ದು ಸದ್ಯ ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.