ಪಿಎಂ ಮೋದಿ ತಮ್ಮ ತಪ್ಪುಗಳನ್ನ ಒಪ್ಪಿಕೊಳ್ಳಬೇಕು
ನವದೆಹಲಿ: ಭಾರತದ ರಾಷ್ಟ್ರೀಯ ದುರಂತಕ್ಕೆ ಪ್ರಧಾನಿ ಮೋದಿಗಳೇ ಕಾರಣ. ಪಿಎಂ ಮೋದಿ ಅವರು ತಮ್ಮ ತಪ್ಪುಗಳನ್ನ ಒಪ್ಪಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ವೈದ್ಯಕೀಯ ವರದಿಗಾರ ದಿ ಲ್ಯಾನ್ಸೆಟ್ ತಮ್ಮ ಸಂಪಾದಕೀಯದಲ್ಲಿ ತಿಳಿಸಿದ್ದಾರೆ.

ಕೊರೊನಾ ಅಲೆ ಸ್ಫೋಟದ ಆರಂಭದ ದಿನಗಳಲ್ಲಿ ಅದನ್ನು ನಿಯಂತ್ರಿಸಬಹುದಾಗಿತ್ತು. ಆದ್ರೆ ಸರ್ಕಾರ ಮಾಡಿಕೊಂಡ ಸ್ವಯಂ ತಪ್ಪುಗಳಿಂದಾಗಿ ಈ ರಾಷ್ಟ್ರೀಯ ದುರಂತಕ್ಕೆ ಕಾರಣವಾಗಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಮೋದಿಯವರ ಕೆಲಸ ಪ್ರಶಂಸೆಗೆ ಯೋಗ್ಯವಾಗಿಲ್ಲ. ಆರಂಭಿಕ ದಿನಗಳಲ್ಲಿಯೇ ಕೋವಿಡ್ ನಿಯಂತ್ರಿಸುವ ಅವಕಾಶವನ್ನ ಭಾರತ ಕಳೆದುಕೊಂಡಿತು. ಅದರ ವಿಫಲತೆ ಪರಿಣಾಮ ನಮ್ಮ ಮುಂದಿದೆ. ಕೊರೊನಾ ಸುಳಿಯಲ್ಲಿ ಸಿಲುಕಿರುವ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ.
ಮೊದಲ ಅಲೆಯ ತೀವ್ರತೆ ಕಡಿಮೆ ಆಗುತ್ತಿದಂತೆ ಸರ್ಕಾರ ಸಹ ಕೊರೊನಾದ ಬಗ್ಗೆ ನಿರ್ಲಕ್ಷ್ಯ ತೋರಿತು. ಕೋವಿಡ್ ಎರಡನೇ ಅಲೆ ಸ್ಫೋಟಗೊಂಡಾಗ ಅಂದ್ರೆ ಏಪ್ರಿಲ್ ನಲ್ಲಿ ಮೋದಿ ಸರ್ಕಾರದಿಂದ ಯಾವುದೇ ಟಾಸ್ಕ್ ಫೋರ್ಸ್ ಸಹ ರಚನೆಗೊಂಡಿರಲಿಲ್ಲ. ಅಂದು ಸರ್ಕಾರ ಕೇವಲ ಸಭೆ, ಚರ್ಚೆಗಳಿಗೆ ಮಾತ್ರ ಸೀಮಿತವಾಗಿತ್ತು. ಸರ್ಕಾರದ ಈ ಹಿಂದಿನ ಯಶಸ್ಸು ಇಂದಿನ ತಪ್ಪುಗಳಿಗೆ ಕಾರಣವಾಗಿದೆ.
2020ರ ಸೆಪ್ಟೆಂಬರ್ ಬಳಿಕ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಾ ಬಂದಿತು. ಕೋವಿಡ್ ಎರಡನೇ ಅಲೆ ಆರಂಭಕ್ಕೂ ಕೆಲ ತಿಂಗಳು ಮುಂಚೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಭಾರತವೂ ಕೊರೊನಾ ಸಾಂಕ್ರಾಮಿಕ ರೋಗದ ಕೊನೆ ಹಂತದಲ್ಲಿದೆ ಎಂದು ಘೋಷಿಸಿದರು. ಆದ್ರೆ ಅದು ಕೊರೊನಾ ಎರಡನೇ ಅಲೆಯ ಪ್ರಾರಂಭ ಅನ್ನೋದನ್ನು ಮರೆತರು.
ಕೊರೊನಾ ಸೋಂಕಿನ ಅಪಾಯಗಳ ಎಚ್ಚರಿಕೆಯ ಹೊರತಾಗಿಯೂ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿತು. ಇತ್ತ ದೇಶಾದ್ಯಂತ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ ಬೃಹತ್ ರಾಜಕೀಯ ಸಮಾವೇಶಗಳನ್ನು ಆಯೋಜಿಸಿತು. ತಜ್ಞರು ಕೊರೊನಾ ಸ್ಫೋಟದ ಎಚ್ಚರಿಕೆಗಳನ್ನ ನೀಡಿದ್ರೂ ಈ ರಾಜಕೀಯ ಸಮಾವೇಶಗಳು ನಡೆದವು. ಈ ಎಲ್ಲ ಕಾರಣಗಳು ಕೋವಿಡ್ ಪಸರಿಸಲು ಮೂಲ ಕಾರಣಗಳಾಗಿವೆ.
ಇನ್ನೂ ಭಾರತದಲ್ಲಿಯೇ ಎರಡು ಲಸಿಕೆಗಳಿದ್ರೂ ಮೋದಿ ಸರ್ಕಾರ ವ್ಯವಸ್ಥಿತವಾಗಿ ವ್ಯಾಕ್ಸಿನೇಷನ್ ಅಭಿಯಾನ ಮಾಡಲಿಲ್ಲ. ಕೊರೊನಾ ನಿಯಂತ್ರಣಕ್ಕೆ ಬದಲಾಗಿ ಕೇಂದ್ರ ಸರ್ಕಾರ ಟ್ವಿಟ್ಟರ್ ಜೊತೆ ಯುದ್ಧಕ್ಕೆ ಇಳಿದಿತ್ತು. ಆಗಸ್ಟ್ 1 ರ ಹೊತ್ತಿಗೆ ಭಾರತದಲ್ಲಿ ಕೊರೊನಾ 10 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳಬಹುದು ಎಂದು ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಲ್ಯೂಷನ್ ಅಂದಾಜಿಸಿದೆ. ಒಂದು ವೇಳೆ ಈ ಅಂದಾಜು ಸತ್ಯವಾದ್ರೆ ಈ ಆತ್ಮಹತ್ಯಾ ರಾಷ್ಟ್ರೀಯ ದುರಂತಕ್ಕೆ ಮೋದಿ ಸರ್ಕಾರವೇ ಕಾರಣವಾಗಿರುತ್ತದೆ ಎಂದು ದಿ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಬರೆಯಲಾಗಿದೆ.