ಬೆಂಗಳೂರು : ದೇಶದಲ್ಲಿ ಕೊರೊನಾ ವೈರಸ್ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ನಿತ್ಯ ಸಾವಿರಾರು ಜನರು ದೇಶದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂಕಷ್ಟದ ಸಂಧರ್ಭದಲ್ಲಿ ಅದ್ಧೂರಿ ರಂಜಾನ್ ಆಚರಣೆಗೆ ಬ್ರೇಕ್ ಹಾಕಲು ನಿರ್ಧರಿಸಲಾಗುತ್ತಿದೆ.
ಮೇ 14 ರಂದು ಮುಸ್ಲಿಂ ಬಾಂಧವರು ದೇಶದ್ಯಾಂತ ಪವಿತ್ರ ರಂಜಾನ್ ಆಚರಿಸಲಿದ್ದಾರೆ. ಅತಿದೊಡ್ಡ ಹಬ್ಬ ಅಂತಾ ಕರೆಸಿಕೊಳ್ಳುವ ಪವಿತ್ರ ರಂಜಾನ್ ಆಚರಣೆಗೆ ತಿಂಗಳುಗಳ ತಯಾರಿ ಸಾಮಾನ್ಯವಾಗಿರುತ್ತೆ. ಹೊಸ ಬಟ್ಟೆ, ಹಬ್ಬದ ತಯಾರಿ ಅಂತಾ ರಂಜಾನ್ ಮಾಸದ ಕಡೆಯ ವಾರ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡಲಾಗುತ್ತೆ.

ಸದ್ಯ ಹಬ್ಬಕ್ಕೆ ನಾಲ್ಕೆ ದಿನ ಬಾಕಿ ಉಳಿದಿದ್ದು ಕೊರೊನಾ ಸಂದರ್ಭದಲ್ಲಿ ರಂಜಾನ್‌ಅನ್ನು ಅದ್ದೂರಿಯಾಗಿ ಆಚರಿಸದಿರುವ ಬಗ್ಗೆ ಚರ್ಚೆಗಳಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಯಾವುದೇ ದೊಡ್ಡ ಪ್ರಮಾಣದ ಶಾಪಿಂಗ್, ಹೊಸ ಬಟ್ಟೆಗಳ ಖರೀದಿ ಮಾಡದೇ ಸರಳ ಮತ್ತು ಮಾದರಿಯ ರಂಜಾನ್ ಆಚರಿಸಲು ಸಮುದಾಯದ ಜನರಿಗೆ ಕರೆ ನೀಡಲಾಗುತ್ತಿದೆ.

ಈ ಸಂಬಂಧ ಇಂದು ರಾತ್ರಿ 9 ಗಂಟೆಯಿಂದ ಸಮುದಾಯದ ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಟ್ವಿಟರ್ ಕ್ಯಾಂಪೇನ್ ಮಾಡಲಾಗುತ್ತಿದೆ. #NoEidShopping ಹ್ಯಾಶ್ ಟ್ಯಾಗ್ ಅಡಿಯಲ್ಲಿ ಕ್ಯಾಂಪೇನ್ ಮಾಡಲಾಗುತ್ತಿದೆ. ನಾಲ್ಕು ದಿನಗಳಲ್ಲಿ ಹಬ್ಬ ಬರಲಿದ್ದು ಶಾಪಿಂಗ್ ಮಾಡದೇ ಸರಳವಾಗಿ ಆಚರಿಸಬೇಕು, ಶಾಪಿಂಗ್ ಗೆ ಬಳಸುವ ಹಣವನ್ನು ಕಷ್ಟದಲ್ಲಿರುವ ಜನರಿಗೆ ಸಹಾಯ ರೂಪದಲ್ಲಿ ನೀಡಬೇಕು ಎನ್ನುವ ಅರಿವು ಮೂಡಿಸುವ ಉದ್ದೇಶ ಈ ಕ್ಯಾಂಪೇನ್ ಹೊಂದಿದೆ.