ನವದೆಹಲಿ : ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಸಾಯುತ್ತಿರುವುದನ್ನು ನೋಡಿಕೊಂಡು ಹೈಕೋರ್ಟ್ ಸುಮ್ಮನೆ ಕೂರಲು ಸಾಧ್ಯವಿಲ್ಲ, ಜನರ ಜೀವದ ವಿಚಾರವಾಗಿ ಹೈಕೋರ್ಟ್ ನೀಡಿದ ಆದೇಶ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ನೀಡುವಂತೆ ಆದೇಶ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ವಿಚಾರಣೆ ವೇಳೆ ಇಂತಹದೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ, ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ ಒಂದು ವೇಳೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದಲ್ಲಿ ಜನರು ಆಕ್ಸಿಜನ್ ಇಲ್ಲದೇ ಸಾಯಲಿದ್ದಾರೆ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾವು ಕರ್ನಾಟಕದೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ನಮ್ಮಗೆ ಕಾಳಜಿ ಇದೆ. ಆದರೆ, ದೇಶದ ಎಲ್ಲ ಹೈಕೋರ್ಟ್ ಗಳು ಆಕ್ಸಿಜನ್ ಪೂರೈಕೆ ಬಗ್ಗೆ ಸೂಚನೆಗಳನ್ನು ನೀಡಲು ಪ್ರಾರಂಭಿಸಿದರೆ ಕೇಂದ್ರ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲವಾಗುವುದಿಲ್ಲ ಎಂದು ಹೇಳಿದರು.
ಆಮ್ಲಜನಕ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ನೀಡಿದ ಆದೇಶದ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್. ಹೈಕೋರ್ಟ್ ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಪೀಠ. #SupremeCourt #oxygen pic.twitter.com/BD7txuMtPT
— ಬಾರ್ & ಬೆಂಚ್ – Kannada Bar & Bench (@Kbarandbench) May 7, 2021
ಕರ್ನಾಟಕದ ಜೊತೆಗೆ ಕೇಂದ್ರ ಮಾತುಕತೆ ನಡೆಸಲಿದ್ದು ದೇಶದಲ್ಲಿ ಆಕ್ಸಿಜನ್ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು ಅತ್ಯುತ್ತಮ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ ಈ ಹಿನ್ನಲೆ 1200 ಮೆಟ್ರಿಕ್ ಟನ್ ನೀಡುವಂತೆ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸುಪ್ರೀಂಕೋರ್ಟ್, ಕರ್ನಾಟಕದಲ್ಲಿ 3.9 ಲಕ್ಷ ಆಕ್ಟಿವ್ ಪ್ರಕರಣಗಳಿವೆ, ಕನಿಷ್ಠ 1700 ಮೆಟ್ರಿಕ್ ಟನ್ ಆಮ್ಲಜನಕದ ಅವಶ್ಯಕತೆ ಇದೆ. ಜನರು ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವಾಗ ಹೈಕೋರ್ಟ್ ಮೌನವಾಗಿರಲು ಸಾಧ್ಯವಿಲ್ಲ ಹೀಗಾಗಿ ಹೈಕೋರ್ಟ್ ನೀಡಿದ ಆದೇಶ ಸರಿಯಾಗಿದ್ದು ನಾವು ತಡೆ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿತು.
ದೆಹಲಿ ಆಕ್ಸಿಜನ್ ಕೊರತೆ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡಿದ್ದೇವು ಆದರೆ ನಾವು ಕರ್ನಾಟಕದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮುಂದಿನ 4 ದಿನಗಳಲ್ಲಿ ರಾಜ್ಯದ ಮನವಿಯನ್ನು ಪರಿಗಣಿಸಿ, ಅಲ್ಲಿಯವರೆಗೂ ತಕ್ಷಣ ಜಾರಿ ಬರುವಂತೆ ದಿನಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದೆ.
ಇದರಿಂದ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು 1200 ಮೆಟ್ರಿಕ್ ಟನ್ ಆಕ್ಸಿಜನ್ ನಿತ್ಯ ಸರಬರಾಜು ಮಾಡಬೇಕಿದೆ. ಸುಪ್ರೀಂಕೋರ್ಟ್ ಈ ಆದೇಶದಿಂದ ಕರ್ನಾಟಕಕ್ಕೆ ಸ್ವಲ್ಪ ಮಟ್ಟಿನ ಆಕ್ಸಿಜನ್ ಕೊರತೆ ನೀಗಲಿದೆ.