ಬೆಂಗಳೂರು : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮೂರು ಮಹಾ ದುರಂತಗಳು ಸಂಭವಿಸಿದ್ದು ಇಂದು ಪ್ರಾಣವಾಯು ಕೊರತೆಯಿಂದ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ.
ಕಲಬುರಗಿ ಜಿಲ್ಲೆ ಅಫ್ಜಲ್‌ಪುರದ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಸಿಗದೆ ನಾಲ್ವರು ರೋಗಿಗಳು ಸಾವನ್ನಪ್ಪಿದ್ದರೇ, ಬೆಂಗಳೂರಿನ ಯಲಹಂಕದಲ್ಲಿರುವ ಅರ್ಕ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ಪ್ರಾಣವಾಯುವಿನ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ ಈ ಮೂಲಕ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ 33 ಕ್ಕೆ ಏರಿದೆ.
ಅಫ್ಜಲ್‌ಪುರದ ಆಸ್ಪತ್ರೆಯಲ್ಲಿ 40 ಕ್ಕೂ ಅಧಿಕ ರೋಗಿಗಳು ಆಕ್ಸಿಜನ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಆಮ್ಲಜನಕದ ಕೊರತೆ ಕಾಡಿದೆ, 40 ಮಂದಿ ಪೈಕಿ ಆಕ್ಸಿಜನ್ ಕೊರತೆಯಿಂದಾಗಿ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆನ್ನಲಾಗಿದೆ.

ಬೆಂಗಳೂರಿನ ಅರ್ಕ್ ಆಸ್ಪತ್ರೆಯಲ್ಲಿ ಅವಶ್ಯಕತೆಗಿಂತ ಹೆಚ್ಚು ರೋಗಿಗಳನ್ನು ದಾಖಲು ಮಾಡಿಕೊಂಡಿದ್ದು ಅನಾಹುತಕ್ಕೆ ಕಾರಣ ಎನ್ನಲಾಗಿದೆ. 20 ಬೆಡ್ ಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ 40 ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು, ಆಸ್ಪತ್ರೆಯಲ್ಲಿ ನಾಲ್ಕು ಆಕ್ಸಿಜನ್ ಸಿಲಿಂಡರ್ ಇದಿದ್ದು ಆಕ್ಸಿಜನ್ ಕೊರತೆ ಅನಾಹುತಕ್ಕೆ ಕಾರಣವಾಗಿದೆ.
ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಿಂದ ರೋಗಿಗಳನ್ನು ದಾಖಲು ಮಾಡಿಕೊಂಡಿಲ್ಲ. ಆಂಬ್ಯುಲೇನ್ಸ್ ನಲ್ಲಿ ಆಕ್ಸಿಜನ್ ಗಾಗಿ ಸಾಕಷ್ಟು ಪ್ರಯತ್ನ ಮಾಡಿದರೂ ಆಕ್ಸಿಜನ್ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.

ಸದ್ಯ ಅರ್ಕ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇದ್ದು ಇತ್ತ ಅಫ್ಜಲ್‌ಪುರದ ಆಸ್ಪತ್ರೆಯಲ್ಲಿ 35 ರೋಗಿಗಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿದ್ದು ಮತ್ತಷ್ಟು ಆಸ್ಪತ್ರೆಗಳಲ್ಲಿ ಮಹಾದುರಂತಗಳು ನಡೆಯುವ ಆತಂಕ ವ್ಯಕ್ತವಾಗಿದೆ