ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮುಂದಿನ ಪರೀಕ್ಷಾ ದಿನಾಂಕಗಳನ್ನು 15 ರಿಂದ 20 ದಿನಗಳ ಮುಂಚಿತವಾಗಿ ಪ್ರಕಟಿಸಲಾಗುತ್ತೆ. ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಮುಂದುವರೆಸಿ ಎಂದು ಹೇಳಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಗಳ ಮೂಂದಿಡಿರುವ ಸರ್ಕಾರ ಪ್ರಥಮ ಪಿಯು ಪರೀಕ್ಷೆಗಳನ್ನು ರದ್ದುಪಡಿಸಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಿದೆ.
ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ
ಸರ್ಕಾರ ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ ನೀಡಿದ್ದು, ಮನೆಯಲ್ಲಿಯೇ ಉಪನ್ಯಾಸಕರು ಸುರಕ್ಷಿತವಾಗಿದ್ದು, ಕಾಲೇಜಿನ ಆಡಳಿತಾತ್ಮಕ ಕೆಲಸ ಸೇರಿದಂತೆ ವಿದ್ಯಾರ್ಥಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುವಂತೆ ಸೂಚಿಸಿದೆ. ಅಲ್ಲದೆ, ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರು ತಮ್ಮ ಕೋವಿಡ್ ಜವಾಬ್ದಾರಿಗಳನ್ನು ಪೂರೈಸಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.