– ಸಿಎಂ ಬಿಎಸ್‌ವೈಗೆ “ಸೆಕ್ಯೂಲರ್ ಟಿವಿ” ಆಗ್ರಹ
ಬೆಂಗಳೂರು : ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕಳೆದ 24 ಗಂಟೆಯಲ್ಲಿ 24 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೂ ಸರ್ಕಾರ ಈವರೆಗೂ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ ಮೀನಾಮೇಷ ಎಣಿಸುತ್ತಿದೆ.
ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿರುವ ಘಟನೆಗಳು ನಡೆದಿವೆ, ಇಂತಹ ದುರ್ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಿರುವಾಗ ಎಚ್ಚೇತ್ತು ಕೊಳ್ಳದೇ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಪರ ಸರ್ಕಾರ ಇನ್ನು ಬ್ಯಾಟಿಂಗ್ ಮಾಡುತ್ತಿದೆ.

ಚಾಮರಾಜನಗರದ ದುರ್ಘಟನೆ ವರದಿಯಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಘಟನೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಣ ಅನ್ನೊ ಆರೋಪಗಳು ಕೇಳಿ ಬರುತ್ತಿದ್ದರೇ, ಮತ್ತೊಂದು ಕಡೆ ಆಸ್ಪತ್ರೆ ಮತ್ತು ಜಿಲ್ಲಾಡಳಿತದ ಕರ್ತವ್ಯ ಲೋಪ ಎನ್ನಲಾಗುತ್ತಿದೆ.
24 ಮಂದಿ ಕೊರೊನಾ ರೋಗಿಗಳು ಸಾವನ್ನಪ್ಪಿದ ಮೇಲೂ ರಾಜ್ಯ ಸರ್ಕಾರ ಆಕ್ಸಿಜನ್ ಕೊರತೆಯಿಂದ ಎಲ್ಲ ರೋಗಿಗಳು ಸಾವನ್ನಪ್ಪಿಲ್ಲ ಎಂದು ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ. ಅಲ್ಲದೇ ಈಗ ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಸರಬರಾಜು ಲೋಪವಾದರೆ ಡಿಸಿ, ಎಸ್‌ಪಿ ಹೊಣೆ ಎಂದು ಹೊಸ ಆದೇಶ ಹೊರಡಿಸಿದೆ.

ಅಧಿಕಾರಿಗಳ ಕರ್ತವ್ಯ ಲೋಪ, ಜನರ ಸಾವಿನ ವಿಚಾರದಲ್ಲೂ ಮೃಧು ಧೋರಣೆ ತಾಳುತ್ತಿರುವ ಬಿ.ಎಸ್ ಯಡಿಯೂರಪ್ಪ ಅವರೇ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಅವರ ಕಿವಿ ಹಿಂಡಿ ಕೆಲಸ ಮಾಡಿಸಿ, ಅಧಿಕಾರಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೇ ನೀವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ನಿಮ್ಮ ರಾಜೀನಾಮೆ ಇಲ್ಲವಾದರೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮುಖ್ಯ ಆರೋಗ್ಯ ಅಧಿಕಾರಿ ಹಾಗೂ ಆಸ್ಪತ್ರೆಯ ಮುಖ್ಯಸ್ಥರು ಸೇರಿದಂತೆ ಘಟನೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಘಟನೆ ಸಂಬಂಧ ವರದಿ ಪಡೆದು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಬಳಿಕ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜನರ ಪರವಾಗಿ ಸೆಕ್ಯೂಲರ್ ಟಿವಿ ಆಗ್ರಹಿಸುತ್ತಿದೆ.