ಆಕ್ಸಿಜನ್ ಪೂರೈಸಿರೋದಾಗಿ ಹೇಳ್ತಿರುವ ಜಿಲ್ಲಾಡಳಿತ
ಯಾರ ತಪ್ಪಿಗೆ ಈ ಸಾವುಗಳು?
ಕಲಬುರಗಿ ಬಳಿಕ ರಾಜ್ಯದಲ್ಲಿ ಮತ್ತೊಂದು ಘನಘೋರ ದುರಂತ
ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಪ್ರಾಣವಾಯು ಸಿಗದ ಹಿನ್ನೆಲೆಯಲ್ಲಿ 24 ರೋಗಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭಾನುವಾರ ರಾತ್ರಿ 16 ಹಾಗೂ ಇಂದು ಬೆಳಗ್ಗೆ 6 ಜನಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸುತ್ತಿವೆ. 24 ರೋಗಿಗಳು ಸಾವನ್ನಪ್ಪಿರುವ ಬಗ್ಗೆಯೂ ಆರೋಗ್ಯ ಅಧಿಕಾರಿಗಳು ಖಚಿತ ಪಡಿಸಿದ್ದು, ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎನ್ನಲಾಗುತ್ತಿದೆ.

ಭಾನುವಾರ ರಾತ್ರಿಯೇ ಆಕ್ಸಿಜನ್ ಕೊರತೆ ಇದೆ ಎಂದು ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಗಲಾಟೆ ಮಾಡಿದ್ದರು. ಇತ್ತ ಚಾಮರಾಜನಗರದ ಸ್ಥಳೀಯ ಬಿಜೆಪಿ ಮುಖಂಡ ಚಂದ್ರಶೇಖರ್ ಎಂಬವರು, ನಾನು ಸಹ ನನ್ನ ಸೋದರನನ್ನು ಕಳೆದುಕೊಂಡಿದ್ದೇನೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇದೆ ಎಂದು ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ:
250 ಆಕ್ಸಿಜನ್ ಸಿಲಿಂಡರ್ ಗಳನ್ನು ಭಾನುವಾರ ರಾತ್ರಿ 12.30ಕ್ಕೆ ರವಾನಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಚಾಮರಾಜನಗರದ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ 250 ಆಕ್ಸಿಜನ್ ಸಿಲಿಂಡರ್ ಇಲ್ಲಿಂದ ರವಾನಿಸಿರುವ ಬಗ್ಗೆ ನಮ್ಮ ದಾಖಲಾತಿಗಳಲ್ಲಿ ದಾಖಲಾಗಿದೆ. ಆದ್ರೆ ಇಲ್ಲಿಂದ ಎಷ್ಟು ಗಂಟೆಗೆ ಅಲ್ಲಿ ತಲುಪಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಮೈಸೂರು ಜಿಲ್ಲಾಡಳಿತ ಹೇಳಿದೆ.
ಈ ಸಾವಿಗೆ ಯಾರು ಹೊಣೆ?
ಮೈಸೂರು ಜಿಲ್ಲಾಡಳಿತ ಕಳುಹಿಸಿದ ಆಕ್ಸಿಜನ್ ಸಿಲಿಂಡರ್ ಗಳು ಸರಿಯಾದ ಸಮಯಕ್ಕೆ ತಲುಪಲಿಲ್ವಾ? ಸಮಸ್ಯೆ ಗಂಭೀರವಾಗಿದ್ರೂ ಚಾಮರಾಜನಗರ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿಸ್ತಾ ಅಥವಾ ಅಧಿಕಾರಿಗಳು ನಡುವೆ ಸಂವಹನ ಆಗಿರಲಿಲ್ವಾ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇನ್ನೂ ಆಸ್ಪತ್ರೆ ಮುಂದೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಾವುಗಳಿಗೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಶನಿವಾರ ಕಲಬುರಗಿಯ ಕೆಬಿಎನ್ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ಕೊರತೆಯಿಂದ ನಾಲ್ವರು ರೋಗಿಗಳು ಸಾವನ್ನಪ್ಪಿದ್ದರು. ಇಷ್ಟು ದಿನ ಆಕ್ಸಿಜನ್ ಕೊರತೆಯಿಂದಾಗುವ ಪ್ರಕರಣಗಳು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿದ್ದವು. ಇದೀಗ ಕರ್ನಾಟಕವೇ ಇಂತಹ ದುರಂತಗಳಿಗೆ ಸಾಕ್ಷಿಯಾಗುತ್ತಿದೆ.