ಬೆಂಗಳೂರು: ಚಾಮರಾಜನಗರ ದುರಂತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಮತ್ತು ಸಿಎಂ ಯಡಿಯೂರಪ್ಪ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೋಪಗೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿಯಾಗಿದೆ.

ಚಾಮರಾಜನಗರ ದುರಂತಕ್ಕೆ ಸಂಬಂಧಿಸಿದಂತೆ ಸಿಎಂಗೆ ಮಾಹಿತಿ ನೀಡಿರುವ ಸುಧಾಕರ್, ಆಕ್ಸಿಜನ್ ಸ್ಟಾಕ್ ಇದೆ. ಆದ್ರೆ ಸೂಕ್ತ ಸಮಯಕ್ಕೆ ಸರಬರಾಜು ಆಗಿಲ್ಲ. ಮೈಸೂರು ಜಿಲ್ಲಾಡಳಿತ ದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಇವತ್ತೇ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಕಠಿಣ ಕ್ರಮಕೈಗೊಳ್ಳಲಿದ್ದಾರೆ ಎಂದು ಬಿತ್ತರವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್, ಇದೊಂದು ನೋವಿನ ಸಂಗತಿ. ಘಟನೆ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಮಂಡ್ಯ, ಮೈಸೂರು ಮತ್ತು ಚಾಮರಾಜನಗರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿಸಿ ಮಾಹಿತಿ ಪಡೆದುಕೊಳ್ಳುತ್ತೇನ ಎಂದು ಹೇಳಿದ್ದಾರೆ.

ಆಗಿದ್ದೇನು?: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಪ್ರಾಣವಾಯು ಸಿಗದ ಹಿನ್ನೆಲೆಯಲ್ಲಿ 24 ರೋಗಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭಾನುವಾರ ರಾತ್ರಿ 16 ಹಾಗೂ ಇಂದು ಬೆಳಗ್ಗೆ 6 ಜನಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸುತ್ತಿವೆ. 24 ರೋಗಿಗಳು ಸಾವನ್ನಪ್ಪಿರುವ ಬಗ್ಗೆಯೂ ಆರೋಗ್ಯ ಅಧಿಕಾರಿಗಳು ಖಚಿತ ಪಡಿಸಿದ್ದು, ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎನ್ನಲಾಗುತ್ತಿದೆ.

ಭಾನುವಾರ ರಾತ್ರಿಯೇ ಆಕ್ಸಿಜನ್ ಕೊರತೆ ಇದೆ ಎಂದು ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಗಲಾಟೆ ಮಾಡಿದ್ದರು. ಇತ್ತ ಚಾಮರಾಜನಗರದ ಸ್ಥಳೀಯ ಬಿಜೆಪಿ ಮುಖಂಡ ಚಂದ್ರಶೇಖರ್ ಎಂಬವರು, ನಾನು ಸಹ ನನ್ನ ಸೋದರನನ್ನು ಕಳೆದುಕೊಂಡಿದ್ದೇನೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇದೆ ಎಂದು ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ:
250 ಆಕ್ಸಿಜನ್ ಸಿಲಿಂಡರ್ ಗಳನ್ನು ಭಾನುವಾರ ರಾತ್ರಿ 12.30ಕ್ಕೆ ರವಾನಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಚಾಮರಾಜನಗರದ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ 250 ಆಕ್ಸಿಜನ್ ಸಿಲಿಂಡರ್ ಇಲ್ಲಿಂದ ರವಾನಿಸಿರುವ ಬಗ್ಗೆ ನಮ್ಮ ದಾಖಲಾತಿಗಳಲ್ಲಿ ದಾಖಲಾಗಿದೆ. ಆದ್ರೆ ಇಲ್ಲಿಂದ ಎಷ್ಟು ಗಂಟೆಗೆ ಅಲ್ಲಿ ತಲುಪಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಮೈಸೂರು ಜಿಲ್ಲಾಡಳಿತ ಹೇಳಿದೆ.