ದೇಶದಲ್ಲಿ ಇಂದಿನಿಂದ ಮೂರನೇ ಹಂತದ ವ್ಯಾಕ್ಸಿನ್ ಕಾರ್ಯಕ್ರಮ ಪ್ರಾರಂಭವಾಗಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಲಭ್ಯ ಎಂದು ಸರ್ಕಾರ ಘೋಷಿಸಿದೆ. ಆದರೆ, ವ್ಯಾಕ್ಸಿನ್ ಅಭಿಯಾನಕ್ಕೆ ಹಲವಾರು ರಾಜ್ಯಗಳಲ್ಲಿ ವ್ಯಾಕ್ಸಿನ್ ಕೊರತೆಯುಂಟಾಗಿದ್ದು, ಲಸಿಕ ಅಭಿಯಾನಕ್ಕೆ ತೊಡಕಾಗಿದೆ. ಕರ್ನಾಟಕದಲ್ಲೂ ಲಸಿಕೆ ಕೊರತೆಯಿದ್ದರೂ ಸಹ ಮುಖ್ಯಮಂತ್ರಿ ಯಡಿಯೂರಪ್ಪನವರು ಸಾಂಕೇತಿಕ ಮೂರನೇ ಹಂತದ ಲಸಿಕೆ ಅಭಿಯಾನಕ್ಕೆ ಶಿವಾಜಿನಗರದ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಚಾಲನೆ ನೀಡಿದ್ದಾರೆ.

4 ಲಕ್ಷ ಲಸಿಕೆ ರಾಜ್ಯ ಸರ್ಕಾರದ ಬಳಿಯಿದ್ದು, ಅದನ್ನು 18 ವರ್ಷ ಮೇಲ್ಪಟ್ಟವರಿಗೂ ಇಂದಿನಿಂದ ನೀಡುತ್ತೇವೆ. 2 ಕೋಟಿ ಲಸಿಕೆಗೆ ಹಣ ಬಿಡುಗಡೆಯಾಗಿದೆ. ಎರಡ್ಮೂರು ದಿನಗಳಲ್ಲಿ ಲಸಿಕೆ ಪೂರೈಕೆಯಾಗುತ್ತೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
18 ವರ್ಷದ ಮೇಲ್ಪಟ್ಟವರು ಮೂರನೇ ಹಂತದ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಸುಮಾರು 2.45 ಕೋಟಿ ಜನರು ನೋಂದಣೆ ಮಾಡಿದ್ದಾರೆ. ಮೂರನೇ ಹಂತದ ಲಸಿಕೆಗೆ ಅಗತ್ಯವಿರುವ ಲಸಿಕೆಯನ್ನು ರಾಜ್ಯ ಸರ್ಕಾರಗಳು, ತಮ್ಮದೇ ವೆಚ್ಚದಲ್ಲಿ ಓಪನ್ ಮಾರುಕಟ್ಟೆಯಲ್ಲಿ ಶೇ 50 ರಷ್ಟು ವ್ಯಾಕ್ಸಿನ್ ಖರೀದಿಸಬೇಕಿತ್ತು. ಆದರೆ, ನಮ್ಮ ದೇಶದಲ್ಲಿ ಲಭ್ಯವಿರುವ ಸೀರಂ ಕಂಪನಿಯ ಕೋವಿಶೀಲ್ಡ್ ಮತ್ತು ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಹಲವು ರಾಜ್ಯಗಳು ಖರೀದಿಗೆ ಬೇಡಿಕೆ ಸಲ್ಲಿಸಿವೆ. ವಿಪರ್ಯಾಸವೆಂದರೆ ಯಾವ ರಾಜ್ಯಕ್ಕೂ ಲಸಿಕೆ ಪೂರೈಕೆಯಾಗಿಲ್ಲ. ಹೀಗಾಗಿ, ಮಹಾರಾಷ್ಟ್‌ರ, ದೆಹಲಿ ಸೇರಿದಂತೆ ಹಲವು ರಾಜ್ಯಗಳು ವ್ಯಾಕ್ಸಿನ್ ಕೊರತೆಯಿಂದ ಮೇ 1 ರಿಂದ ಪ್ರಾರಂಭವಾಗಬೇಕಿದ್ದ ಮೂರನೇ ಹಂತದ ಲಸಿಕೆ ಕಾರ್ಯಕ್ರಮವನ್ನು ಮುಂದೂಡಿವೆ.