ನವದೆಹಲಿ : ದೇಶದಲ್ಲಿ ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಇಂದು ದಾಖಲೆಯ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲ ಬಾರಿಗೆ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,01,993 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ದೇಶದಲ್ಲಿ ಇದೇ ಮೊದಲ ಬಾರಿಗೆ 4 ಲಕ್ಷಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ. ನಿನ್ನೆ ಒಂದೇ ದಿನ ಕೊರೋನಾಗೆ 3,523 ಜನ ಬಲಿಯಾಗಿದ್ದಾರೆ. ಸದ್ಯ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1,91,64,969ಕ್ಕೆ ಏರಿಕೆಯಾದ್ರೆ ಇನ್ನೂ 32,68,710 ಸಕ್ರಿಯ ಪ್ರಕರಣಗಳಿದೆ. ಈವರೆಗೂ ದೇಶದಲ್ಲಿ ಕೊರೋನಾಗೆ 2,11,853 ಜನ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆಯ ಈ ಅಂಕಿ ಅಂಶಗಳನ್ನು ಗಮನಿಸಿದರೆ ದೇಶದಲ್ಲಿ ಪ್ರತಿ ಸೆಕೆಂಡಿಗೆ ನಾಲ್ಕು ಮಂದಿಗೆ ಸೋಂಕು ಪತ್ತೆಯಾಗುತ್ತಿದೆ ಅಲ್ಲದೇ ನಿಮಿಷಕ್ಕೆ ಇಬ್ಬರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ದೇಶದಲ್ಲಿ ಪಾಸಿಟಿವಿಟಿ ಪ್ರಮಾಣ ಶೇಕಡಾ 30% ರಷ್ಟಿದ್ದು ನೂರು ಜನರನ್ನು ಪರೀಕ್ಷೆಗೆ ಒಳಪಡಿಸರೇ 30 ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ.

ಏಪ್ರಿಲ್ 1 ರಿಂದ ಭಾರತದಲ್ಲಿ 45,403 ಸಾವುಗಳನ್ನು ವರದಿಯಾಗಿದೆ ಈ ಪೈಕಿ 27,800 ಸಾವುಗಳು ಏಪ್ರಿಲ್ 21 ಬಳಿಕ ವರದಿಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. 10 ರಾಜ್ಯಗಳಲ್ಲಿ 77% ಸಾವುಗಳು ದಾಖಲಾಗುತ್ತಿದೆ. 10 ರಾಜ್ಯಗಳಲ್ಲಿ 73.05% ರಷ್ಟು ಸೋಂಕಿತರ ಪತ್ತೆಯಾಗುತ್ತಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್ಗಢ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜಸ್ಥಾನ ಸಾವು ಮತ್ತು ಸೋಂಕಿನ ಪ್ರಮಾಣದಲ್ಲಿ ಮುಂದಿವೆ.