ಮೈಸೂರು : ರಾಜ್ಯದಲ್ಲಿ ಜಾರಿ ಮಾಡಿರುವ ಅರೆ ಬರೆ ಲಾಕ್ಡೌನ್ ಪರಿಣಾಮಕಾರಿಯಾಗಿಲ್ಲ ಕೊರೊನಾ ನಿಯಂತ್ರಣಕ್ಕಾಗಿ ಇಡೀ ರಾಜ್ಯವನ್ನು ಸೀಲ್ ಡೌನ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ ಸಲಹೆ ನೀಡಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕೆಲವು ಸಚಿವರ ಮಾತು ಕೇಳಿ ಜಾರಿ ತಂದಿರುವ ನಿಯಮಗಳಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಬೆಳಗ್ಗೆ 6 ರಿಂದ 10 ವರೆಗೂ ಮಾರುಕಟ್ಟೆಗಳು ತೆರದಿವೆ, ದಿನಸಿ, ತರಕಾರಿ, ಮಧ್ಯ ಸೇರಿ ಎಲ್ಲ ರೀತಿಯ ಅಂಗಡಿಗಳು ತೆರೆದಿವೆ, ನಿಯಮಗಳನ್ನು ಉಲ್ಲಂಘಿಸಿ ಮಧ್ಯಾಹ್ನ1 ಗಂಟೆವರೆಗೂ ತೆರೆಯಲಾಗುತ್ತಿದೆ.
ಅಲ್ಲದೇ ಗಾಮೇಂಟ್ಸ್ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು ಸಂಚಾರ ಮಾಡುತ್ತಿದ್ದಾರೆ, ಕಟ್ಟಡ ಕಾರ್ಮಿಕರ ದೊಡ್ಡ ಸಂಖ್ಯೆಯಲ್ಲಿ ಕೆಲಸದಲ್ಲಿ ತೊಡಗಿದ್ದಾರೆ ಇದರಿಂದ ಸೋಂಕು ಹಬ್ಬುವ ಸಾಧ್ಯತೆಗಳು ಹೆಚ್ಚಿದ್ದು ನಿಯಂತ್ರಣ ಅಸಾಧ್ಯ ಎಂದು ವಿಶ್ವನಾಥ ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನಲೆ ಶ್ರಮಿಕ ವರ್ಗಗಳಿಗೆ ಸೂಕ್ತ ವ್ಯವಸ್ಥೆ ಮಾಡುವ ಮೂಲಕ ರಾಜ್ಯವನ್ನು ಸಂಪೂರ್ಣ ಸೀಲ್ಡೌನ್ ಮಾಡಿ ಕೊರೊನಾದಿಂದ ರಾಜ್ಯ ಮತ್ತು ರಾಜ್ಯದ ಜನರನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಂಪನಿ ಕಂಪನಿಗಳು ಮತ್ತು ಎನ್‌ಜಿಓಗಳ ಸಹಕಾರ ಪಡೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಜೊತೆಗೆ ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳು ಮರೆತು ಕೈ ಜೋಡಿಸಿ ಕಾರ್ಯ ನಿರ್ವಹಿಸಬೇಕು ಎಂದು ವಿಶ್ವನಾಥ ಹೇಳಿದ್ದಾರೆ.