ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ ಸೋಂಕಿತರ ಸಂಖ್ಯೆ ನಿತ್ಯ ನಾಲ್ಕು ಲಕ್ಷಕ್ಕೆ ಏರುತ್ತಿದೆ. ಸಾವಿನ ಸಂಖ್ಯೆಯಂತೂ ನಾಲ್ಕು ಸಾವಿರ ಗಡಿ ತಲುಪಿಯಾಗಿದೆ. ಜನರು ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಜನರ ಈ ಸಂಕಷ್ಟವನ್ನು ನೋಡಿದ ಆಟೋ ಚಾಲಕರೊಬ್ಬರು ತಮ್ಮ ಆಟೋವನ್ನು ಆಂಬ್ಯುಲೆನ್ಸ್ ರೀತಿಯಲ್ಲಿ ಬದಲಾಯಿಸಿ ಸೇವೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಮಧ್ಯಪ್ರದೇಶದ ಭೂಪಾಲ್ ಮೂಲದ ಜಾವೇದ್ ಖಾನ್ ಈ ಮಾದರಿ ಆಟೋ ಡ್ರೈವರ್, ತನ್ನ ಹೆಂಡತಿ ಒಡವೆಗಳನ್ನು ಮಾರಿ ಆಟೋವನ್ನು ಆಂಬ್ಯುಲೆನ್ಸ್ ಮಾದರಿಯಲ್ಲಿ ಬದಲಾಯಿಸಿ ಕೊರೊನಾ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ.
ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಜಾವೇದ್ ಖಾನ್ ನಿತ್ಯ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆ ಸೇರುವುದರಲ್ಲಿ ರೋಗಿಗಳು ಸಾವನ್ನಪ್ಪುವುದನ್ನು ಕಂಡಿದ್ದರು. ಇದಕ್ಕಾಗಿ ಅವರು ತಮ್ಮ ಆಟೋದಲ್ಲಿ ಆಕ್ಸಿಜನ್ ನೆರವಿನೊಂದಿಗೆ ಕೊರೊನಾ ಸೋಂಕಿತ ತುರ್ತು ರೋಗಿಗಳಿಗೆ ಸೇವೆ ನೀಡಲು ನಿರ್ಧರಿಸಿದರು. ಬಳಿಕ ಹೆಂಡತಿಯ ಒಡವೆ ಮಾರಿ ಬಂದ ಹಣದಲ್ಲಿ ಆಕ್ಸಿಜನ್ ಸೇರಿ ಇತರೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಆಟೋದಲ್ಲಿ ನಿಯೋಜನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನಂಬರ್ ಮತ್ತು ಸೇವೆಯನ್ನು ಪೋಸ್ಟ್ ಮಾಡಿದ್ದು ಸಾಕಷ್ಟು ಜನರು ಇವರ ಸೇವೆಯನ್ನು ಪಡೆದುಕೊಂಡಿದ್ದಾರೆ. ಕಳೆದ 20 ದಿನಗಳಿಂದ ಈ ಸೇವೆ ಆರಂಭಿಸಿರುವ ಜಾವೇದ್ ಖಾನ್ ಉಸಿರಾಟದ ತೊಂದರೆಯಿಂದ ಸಾವಿನ ದವಡೆಯಲ್ಲಿದ್ದ 10ಕ್ಕೂ ಹೆಚ್ಚು ರೋಗಿಗಳಿಗೆ ಸೂಕ್ತ ಸಮಯದಲ್ಲಿ ನೆರವಾಗಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಇವರ ಈ ಮಾದರಿ ಕಾರ್ಯಕ್ಕೆ ಈಗ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.