ಬೆಂಗಳೂರು : ಕೊರೊನಾ ವೈರಸ್ ಸಂಕಷ್ಟದಿಂದ ಇಡೀ ವಿಶ್ವ ಶೀಘ್ರ ಮುಕ್ತವಾಗಲಿ ಎಂದು ಆಶಿಸಿ ಬೃಹತ್ ಸರ್ವ ಧರ್ಮ ಪ್ರಾರ್ಥನಾ ಸಭೆ ನಡೆಸಲು ಯುಎಇ ಕನ್ನಡಿಗರು ತಂಡವು ನಿರ್ಧರಿಸಿದೆ. ದುಬೈ ಮತ್ತು ಅರಬ್ ದೇಶಗಳನ್ನು ಕೇಂದ್ರಿಕರಿಸಿ ಕಾರ್ಯಚರಣೆ ನಡೆಸುತ್ತಿರುವ ಕನ್ನಡಿಗರು ಈ ಪ್ರಾರ್ಥನಾ ಸಭೆ ಹಮ್ಮಿಕೊಂಡಿದ್ದಾರೆ.
ಪವಿತ್ರ ರಂಜಾನ್ ತಿಂಗಳ ಹಿನ್ನಲೆ ದುಬೈ ಮೂಲಕ ಈ ಪ್ರಾರ್ಥನಾ ಸಭೆಯನ್ನು ನಡೆಸಲು ತಿರ್ಮಾನಿಸಲಾಗಿದ್ದು ಎಪ್ರೀಲ್ 30 ರಂದು ಜೂಮ್ ಆ್ಯಪ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಯುಎಇ ಕನ್ನಡಿಗರು ಹಮ್ಮಿಕೊಂಡಿರುವ ಈ ಸರ್ವಧರ್ಮ ರಂಜಾನ್ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರು, ಕೊರೊನಾ ಕಾರಣ ಕಳೆದ ಒಂದು ವರ್ಷದಿಂದ ಇಡೀ ಪ್ರಪಂಚವೇ ನರಳುತ್ತಿದೆ, ಅದರಲ್ಲೂ ನಮ್ಮ ತಾಯ್ನಾಡು ಭಾರತ ಕೋವಿಡ್ ಸೋಂಕಿನಿಂದ ಬಹಳ ಸಂಕಷ್ಟ ಪಡುತ್ತಿದೆ ಹೀಗಾಗಿ ಇಡೀ ವಿಶ್ವದಿಂದಲೇ ಈ ಕೊರೋನಾ ನಶಿಸಿ ಹೋಗಲಿ ಎಂದು ವಿವಿಧ ಧರ್ಮಗಳ ಧರ್ಮ ಗುರುಗಳ ಮೂಲಕ “ಕೋವಿಡ್ ಮುಕ್ತ ವಿಶ್ವಕ್ಕಾಗಿ” ಎಂಬ ಪ್ರಮೇಯದೊಂದಿಗೆ ಪ್ರಾರ್ಥನಾ ಸಭೆಯನ್ನು ನಡೆಸುದರ ಜೊತೆಗೆ ಭಾವೈಕ್ಯತೆಯ ಸಂದೇಶ ಸಾರುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವ್ಯಕ್ಯತೆ ಸಂದೇಶ ಸಾರಲು ಚಿತ್ರದುರ್ಗ ಮುರುಗ ಮಠದ ಧರ್ಮಗುರುಗಳಾದ ಶ್ರೀ ಡಾ. ಮುರುಗರಾಜೇಂದ್ರ ಶಿವಮೂರ್ತಿ ಸ್ವಾಮೀಜಿಗಳು, ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್ ಎಸ್ ಎಫ್ ಎಫ್ ಸಂಘಟನೆಯ ಮಾಜಿ ಅಧ್ಯಕ್ಷರು ಆದ ಮೌಲಾನಾ ಸುಫಿಯಾನ್ ಸಖಾಫಿ, ಚಿಕ್ಕಮಗಳೂರಿನ ಚರ್ಚಿನಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳಾದ ಶ್ರೀ ಫಾದರ್ ಅಂತೋನಿ, ಮಂಗಳೂರಿನ ಧರ್ಮಗುರುಗಳು ಕರ್ನಾಟಕ ಎಸ್ಕೆ ಎಸ್ ಎಸ್ ಎಫ್ ಎಫ್ ಸಂಘಟನೆಯ ಹಾಲಿ ಅಧ್ಯಕ್ಷರು ಆದ ಮೌಲಾನಾ ಅನೀಸ್ ಕೌಸರಿ, ಕರ್ನಾಟಕ ಪುಸ್ತಕ ಬಂಡಾರಕ್ಕೆ ಹಲವು ಧಾರ್ಮಿಕ, ವೈಚಾರಿಕ ಮತ್ತು ಭಾವೈಕ್ಯತಾ ಪುಸ್ತಕಗಳನ್ನು ಕೊಡುಗೆ ನೀಡಿದ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಮೊಹಮ್ಮದ್ ಕುಂಜ್ ಸೇರಿದಂತೆ ಅನೇಕ ಮಹನೀಯರು ಭಾಗಿಯಾಗಲಿದ್ದಾರೆ.