ನವದೆಹಲಿ : ಮಥುರಾ ಜೈಲಿನಲ್ಲಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶಿಸಿದೆ.
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ, ಏಮ್ಸ್ ಅಥವಾ ದೆಹಲಿಯ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಅವರು ಚೇತರಿಸಿಕೊಂಡ ಬಳಿಕ ಮಥುರಾ ಜೈಲಿಗೆ ವಾಪಸ್ ಕಳುಹಿಸಬೇಕೆಂದು ಕೋರ್ಟ್ ಸೂಚನೆ ನೀಡಿದೆ
ಸಿದ್ದೀಕ್ ಕಪ್ಪನ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಮತ್ತು ಜಾಮೀನು ನೀಡುವಂತೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಪ್ಪನ್ ಅವರನ್ನು ದೆಹಲಿಗೆ ಸ್ಥಳಾಂತರಿಸುವುದನ್ನು ತೀವ್ರವಾಗಿ ವಿರೋಧಿಸಿದರು. ದೆಹಲಿಯಲ್ಲಿ ಕೊರೊನಾ ರೋಗಿಗಳಿಂದ ಆಸ್ಪತ್ರೆಗಳೇಲ್ಲ ಭರ್ತಿಯಾಗಿದೆ. ಇಂತಹ ಸಂಧರ್ಭದಲ್ಲಿ ಕೊರೊನಾ ಸೋಂಕಿತರಲ್ಲದವರಿಗೆ ಅಲ್ಲಿ ಚಿಕಿತ್ಸೆ ನೀಡುವುದು ಸೂಕ್ತವಲ್ಲ, ಮಥುರಾ ಜೈಲಿನಲ್ಲೆ ಅತ್ಯುತ್ತಮ ವೈದ್ಯಕೀಯ ಸೇವೆಗಳಿದ್ದು ಚಿಕಿತ್ಸೆ ಮುಂದುವರಿಸಲಾಗುವದು ಎಂದು ಹೇಳಿದರು.
ಆದರೆ ಸಿದ್ದೀಕ್ ಕಪನ್ ಪರ ವಾದ ಮಂಡಿಸಿದ ವಕೀಲ ವಿಲ್ಸ್ ಮ್ಯಾಥ್ಯೂ, ಕಪನ್ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಮತ್ತು ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ನಲ್ಲಿನ ಆರೋಪಗಳು ಯಾವುದೇ ಅಪರಾಧವಲ್ಲ ಹೀಗಾಗಿ ಜಾಮೀನು ನೀಡಿ ಎಂದು ಒತ್ತಾಯಿಸಿದರು. ಎರಡು ಬದಿಯ ವಾದ ಆಲಿಸಿದ ನ್ಯಾಯಪೀಠ ಸದ್ಯ ಕಪನ್ ಅವರಿಗೆ ದೆಹಲಿಯಲ್ಲಿ ಚಿಕಿತ್ಸೆ ನೀಡಲು ನಿರ್ದೇಶನ ನೀಡಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಬಂಧಿಸಿದ್ದ ಯುಪಿ ಪೊಲೀಸರು, ಕೋಮು ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದಡಿ ಯುಎಪಿಎ ಪ್ರಕರಣ ದಾಖಲಿಸಿ ಮಥುರಾ ಜೈಲಿನಲ್ಲಿಡಲಾಗಿದೆ.