ಬೆಳಗಾವಿ : ಸದಾ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸಿಕೊಳ್ಳುವ ಅಹಾರ ಖಾತೆ ಸಚಿವ ಉಮೇಶ್ ಕತ್ತಿ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಪಡಿತರದಲ್ಲಿ ನೀಡುತ್ತಿದ್ದ ಅಕ್ಕಿಯನ್ನು ಕಡಿತಗೊಳಿಸಿದ್ದನ್ನ ಪ್ರಶ್ನಿಸಿದ ರೈತರೊಬ್ಬರಿಗೆ ಉಮೇಶ ಕತ್ತಿ ಸಾಯುವಂತೆ ಸಲಹೆ ನೀಡಿ ಸಾರ್ವಜನಿಕರಿಂದ ಈಗ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.
ಕೊರೊನಾ ಸಂಕಷ್ಟ ಹಿನ್ನಲೆ ಆಹಾರ ಸಚಿವ ಉಮೇಶ ಕತ್ತಿಗೆ ಕರೆ ಮಾಡಿದ ಈಶ್ವರ ಆರ್ಯರ ಎಂಬ ರೈತ ಪಡಿತರದಲ್ಲಿ ನೀಡುತ್ತಿದ್ದ ಅಕ್ಕಿಯನ್ನು ಎರಡು ಕೆಜಿಗೆ ಇಳಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಸಿದ್ದಾರೆ, ಲಾಕ್ಡೌನ್ ಸಂದರ್ಭದಲ್ಲಿ ನೀವೂ ನೀಡುವ ಎರಡು ಅಕ್ಕಿ ಸಾಲುತ್ತಾ ಅಂತಾ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಉಮೇಶ್ ಕತ್ತಿ, ಎರಡು ಕೆಜಿ ಅಕ್ಕಿ ಜೊತೆಗೆ ಮೂರು ಕೆಜಿ ರಾಗಿ ನೀಡುತ್ತೇವೆ ಉತ್ತರ ಕರ್ನಾಟಕದ ಜನರಿಗೆ ಜೋಳ ನೀಡಲಿದ್ದೇವೆ ಎಂದಿದ್ದಾರೆ, ಅಲ್ಲದೇ ಲಾಕ್ಡೌನ್ ಸಂದರ್ಭದಲ್ಲಿ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರ ಮುಂದಿನ ತಿಂಗಳು ನೀಡಲಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಉತ್ತರಿಸಿದ ರೈತ ಈಶ್ವರ, ಕೇಂದ್ರ ಸರ್ಕಾರ ಅಕ್ಕಿ ನೀಡುವವರೆಗೂ ಲಾಕ್ಡೌನ್ ನಲ್ಲಿ ಉಪವಾಸ ಸಾಯೋದಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉಡಾಫೆಯ ಉತ್ತರ ಕೊಟ್ಟಿರುವ ಕತ್ತಿ, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದೇಳಿ ಕರೆ ಕಟ್ ಮಾಡಿದ್ದಾರೆ.
ಅಕ್ಕಿ ಕೇಳಿದ ರೈತನಿಗೆ ಸಾಯೋದು ಒಳ್ಳೆಯದು ಎಂದು ಸಲಹೆ ನೀಡಿರುವ ಉಮೇಶ್ ಕತ್ತಿ ಹೇಳಿಕೆಯ ಆಡಿಯೋ ಈಗ ವೈರಲ್ ಆಗಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಕ್ಡೌನ್ ನಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ಪ್ರಶ್ನಿಸಿದೇ ಇನ್ಯಾರನ್ನು ಕೇಳೊದು ಅಂತಾ ಪ್ರಶ್ನಿಸಿದ್ದಾರೆ.
ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಮೇಶ ಕತ್ತಿ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆ ಅದಕ್ಕೆ ಹಾಗೇ ಉತ್ತರ ನೀಡಿರುವೇ ಎಂದು ಹೇಳಿ ವಿವಾದ ತಣ್ಣಾಂಗಿಸಲು ಪ್ರಯತ್ನ ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.