- ಮಹಾನಗರಗಳಿಗೆ ಕೈ ಮುಗಿದ ಕಾರ್ಮಿಕರು
ಬೆಂಗಳೂರು: ಮಹಾಮಾರಿಯನ್ನ ಕಟ್ಟಿ ಹಾಕೋ ತಡವಾಗಿ ಎಚ್ಚೆತ್ತಿರುವ ರಾಜಾಹುಲಿ ಸರ್ಕಾರ 14 ದಿನಗಳ ಲಾಕ್‍ಡೌನ್ ಮೊರೆ ಹೋಗಿದೆ. ಇನ್ನು ಜನರಿಗೆ ಇಂದು ಮತ್ತು ನಾಳೆ ತಮ್ಮ ನಿಗದಿತ ಸ್ಥಳಕ್ಕೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಹೀಗಾಗಿ ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳಲು ನೂರಾರು ಕನಸು ಹೊತ್ತು ಬಂದ ಕೂಲಿ ಕಾರ್ಮಿಕರು ಸರ್ಕಾರ ಮತ್ತು ಕೊರೊನಾಗೆ ಹಿಡಿ ಶಾಪ ಹಾಕುತ್ತಾ ಗಂಟು ಮೂಟೆ ಸಮೇತ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಇತ್ತ ಲಾಕ್‍ಡೌನ್ ಬೆನ್ನಲ್ಲೇ ಬಹುತೇಕ ಐಟಿ ಕಂಪನಿಗಳು ಸಹ ವರ್ಕ್ ಫ್ರಂ ಹೋಮ್‍ಗೆ ಆದ್ಯತೆ ನೀಡಿದ ಪರಿಣಾಮ ಟೆಕ್ಕಿಗಳು ತಮ್ಮ ಸ್ವಂತ ವಾಹನಗಳಲ್ಲಿ ಕೈಯಲ್ಲೊಂದು ಲ್ಯಾಪ್‍ಟಾಪ್ ಹಿಡಿದುಕೊಂಡು ಮನೆ ಸೇರಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ ಘೋಷಣೆ ಬಳಿಕ ಬೆಂಗಳೂರಿನ ಸ್ಥಿತಿ ದಿಢೀರ್ ಬದಲಾಗಿದೆ. ಇನ್ನೂ ಇಲ್ಲಿಯೇ ಇರೋ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ರೆ, ಮದ್ಯ ಪ್ರಿಯರು ಲಿಕ್ಕರ್ ಶಾಪ್ ಗಳ ಮುಂದೆ ನಾ ನಿನ್ನ ಬಿಡಲಾರೆ ಅಂತ ಕ್ಯೂ ಹಚ್ಚಿರೋ ದೃಶ್ಯಗಳು ಕಾಣಸಿಗುತ್ತಿದೆ.
ಮತ್ತೊಂದು ಕಡೆ ಕಾರ್ಮಿಕ ವರ್ಗ ದಿನಸಿ, ಕೊಡ, ಪಾತ್ರೆ ಮಕ್ಕಳು ಹೀಗೆ ಇಡೀ ಸಂಸಾರವನ್ನ ಹೊತ್ತು ನಮ್ಮೂರಿನ ಬಸ್ ಎಲ್ಲಿ ಬರುತ್ತೆ ಅಂತ ಹುಡುಕಾಡುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಬೆಂಗಳೂರು ತೊರೆಯುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ನೆಲಮಂಗಲ ಟೋಲ್ ಗೇಟ್, ಮೈಸೂರು ರಸ್ತೆ, ಆನೇಕಲ್ ಬಳಿ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿದೆ.

ಕಳೆದ ವರ್ಷವೂ ಸರ್ಕಾರ ಇದೇ ರೀತಿ ಹೊಟ್ಟೆ ಮೇಲೆ ಕಲ್ಲು ಹಾಕಿತ್ತು. ನಾಲ್ಕೈದು ತಿಂಗಳ ಹಿಂದೆ ನಾಲ್ಕು ಕಾಸು ಸಂಪಾದನೆ ಮಾಡೋಣ ಅಂತ ಮತ್ತೆ ಬೆಂಗಳೂರಿಗೆ ಮಕ್ಕಳನ್ನ ಕಟ್ಟಿಕೊಂಡು ಬಂದೆ. ಆದ್ರೆ ಈಗ ಮತ್ತೆ ಎಲ್ಲವೂ ಬಂದ್ ಆಗ್ತಿದೆ. ಇಲ್ಲಿ ಖಾಲಿ ಕುಳಿತರೆ ಜೀವನ ನಡೆಯಲ್ಲ. ಸರ್ಕಾರ ಬಂದ್ ಮಾಡೋ ಮುನ್ನ ಬಗ್ಗೆಯೂ ಯೋಚನೆ ಮಾಡಬೇಕಲ್ವಾ ಅಂತ ಉತ್ತರ ಕರ್ನಾಟಕದ ಮಹಿಳೆ ಅಕ್ರೋಶ ಹೊರ ಹಾಕ್ತಾರೆ.
ಇನ್ನೂ ಮಂಗಳೂರು, ಉಡುಪಿ, ಕಾರವಾರ ಭಾಗದಲ್ಲಿಯ ಕಾರ್ಮಿಕರು ಊರುಗಳತ್ತ ಮುಖ ಮಾಡಿದ್ದಾರೆ. ಬಸ್ ನೀಡಿದ್ರೆ ಸಾಕು ನಾವು ಊರಿಗೆ ಹೋಗ್ತೇವೆ. ಹೀಗೆ ಬಂದ್ ಆದ್ರೆ ಹೊಟ್ಟೆಗೆ ಏನು ತಿನ್ನಬೇಕು ಎಂದು ಬಂದರಿನಲ್ಲಿ ಕೆಲಸ ಮಾಡೋ ಕಾರ್ಮಿಕ ಪ್ರಶ್ನೆ ಮಾಡುತ್ತಾರೆ. ಮಹಾನಗರಗಳಲ್ಲಿದ್ದ ಕಾರ್ಮಿಕ ವರ್ಗ ಹಳ್ಳಿಗಳತ್ತ ಹೊರಟಿದ್ದಾರೆ.