ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವತಿಯಿಂದಲೇ ಉಚಿತ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದ್ದು ಈಗಾಗಲೇ ₹400 ಕೋಟಿ ವೆಚ್ಚದಲ್ಲಿ ಒಂದು ಕೋಟಿ ಡೋಸ್ ಖರೀದಿಸಲು ಸೂಚನೆ ನೀಡಲಾಗಿದೆ ಎಂದರು.
ಮೂರನೇ ಹಂತದ ವ್ಯಾಕ್ಸಿನ್ ಅಭಿಯಾನದಡಿ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಮೇ 1 ರಿಂದ ಕೇಂದ್ರ ಸರ್ಕಾರ 50% ವ್ಯಾಕ್ಸಿನ್ ಮಾತ್ರ ನೀಡಲಿದ್ದು ಬಾಕಿ 50% ವ್ಯಾಕ್ಸಿನ್ ಕಂಪನಿಗಳಿಂದಲೆ ಖರೀದಿ ಮಾಡುವಂತೆ ಸೂಚನೆ ನೀಡಿತ್ತು.

ಖಾಸಗಿ ಮಾರಾಟಕ್ಕೆ ಅವಕಾಶ ಸಿಕ್ಕ ಹಿನ್ನಲೆ ಭಾರತ್ ಬಯೋಟೆಕ್ ನ ದೇಶಿ ಲಸಿಕೆ ಕೊವ್ಯಾಕ್ಸಿನ್ ರಾಜ್ಯಗಳಿಗೆ ಪ್ರತಿ ಡೋಸ್ ಗೆ ₹600, ಖಾಸಗಿ ಆಸ್ಪತ್ರೆಗಳಿಗೆ 1200 ನಿಗಧಿ ಮಾಡಿತ್ತು. ಇನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಗೆ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ಗೆ ₹400 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹600 ಬೆಲೆ ನಿಗಧಿ ಮಾಡಿತ್ತು.
ರಾಜ್ಯ ಸರ್ಕಾರಗಳೇ ವ್ಯಾಕ್ಸಿನ್ ಖರೀದಿ ಮಾಡಬೇಕಾದ ಅನಿವಾರ್ಯತೆ ಬಂದ ಹಿನ್ನಲೆ ರಾಜ್ಯಗಳು ವ್ಯಾಕ್ಸಿನ್ ಗೆ ಬೆಲೆ ನಿಗಧಿ ಮಾಡಲಿವೆ ಎನ್ನಲಾಗಿತ್ತು. ಆದರೆ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ ಗುಜರಾತ್, ಅಸ್ಸಾಂ, ಛತ್ತೀಸ್ಗಢ ಸೇರಿ ಹಲವು ರಾಜ್ಯಗಳಲ್ಲಿ ವ್ಯಾಕ್ಸಿನ್ ಉಚಿತವಾಗಿ ನೀಡಲು ನಿರ್ಧರಿಸಿದ ಹಿನ್ನಲೆ ಈಗ ರಾಜ್ಯದಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಉಚಿತವಾಗಿ ನೀಡಲು ನಿರ್ಧರಿಸಿದೆ.