ಬೆಂಗಳೂರು : ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನಲೆ ನಾಳೆ ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ಡೌನ್ ಮಾದರಿಯಲ್ಲಿ ಬಿಗಿ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ
ಇಂದು ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿ ಮಾಡಲಾಗುತ್ತಿದ್ದು ಸಂಜೆ ವೇಳೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದ್ಯಾಂತ ಬೆಳಗ್ಗೆ 6 ರಿಂದ 10ರ ವರೆಗೂ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು 10 ಗಂಟೆ ಬಳಿಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಮೆಟ್ರೊ ಸಂಚಾರ ಸಂಪೂರ್ಣ ಬಂದ್ ಆಗಲಿದೆ ಎಂದು ಬಿಎಸ್‌ವೈ ತಿಳಿಸಿದರು.
ನೈಟ್ ಕರ್ಫ್ಯೂ, ವಿಕೇಂಡ್ ಲಾಕ್ಡೌನ್ ಮುಂದುವರಿಯಲಿದ್ದು ರಾಜ್ಯದ್ಯಾಂತ ಕಟ್ಟಡ ಕಾಮಗಾರಿಗಳು ನಡೆಸಲು ಅವಕಾಶ ನೀಡಲಾಗಿದೆ. ಗಾರ್ಮೆಂಟ್ಸ್ ಬಿಟ್ಟು ಬೇರೆ ಕಾರ್ಖಾನೆಗಳಿಗೆ, ಕೈಗಾರಿಕೆಗಳಿಗೆ, ಉತ್ಪಾದನಾ ವಲಯಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದ್ದು, ರೆಸ್ಟೋರೆಂಟ್, ಹೋಟೆಲ್ ಮತ್ತು ಬಾರ್ ಗಳಲ್ಲಿ ಮಧ್ಯ ಪಾರ್ಸಲ್ ಪಡೆಯಲು ಅವಕಾಶ ನೀಡಿದೆ.
ಇನ್ನು ಮೂರನೇ ಹಂತದ ಲಸಿಕಾ ಅಭಿಯಾನದ ಭಾಗವಾಗಿ ಮೇ 1ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ.