ಏ ಇಳಿಯಪ್ಪ…. ನೀವೆಲ್ಲಾ ಎಜುಕೇಟೆಡ್ಸ್ ಆ.. ಮಾಸ್ಕ್ ಹಾಕಿಲ್ಲ.. ರೀ ಇವ್ರ ಮೇಲೆ ಕ್ರಿಮಿನಲ್ ಕೇಸ್ ಹಾಕ್ರಿ..
ಹೀಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಏಪ್ರಿಲ್ 19ರಂದು ಬಸ್ ತಡೆದು ತಮ್ಮ ಆಕ್ರೋಶ ಹೊರಹಾಕಿದ್ರು. ಆದ್ರೀಗ, ಅವರೇ ಕಾನೂನು ಉಲ್ಲಂಘನೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಖಾಸಗಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತುಂಬಿದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಕಾಲೇಜು ಮುಗಿಸಿ ಮನೆಗೆ ತಲುಪುತ್ತಿದ್ದ ಹೆಣ್ಣು ಮಕ್ಕಳನ್ನು ಕೋವಿಡ್ ನಿಯಮ ಉಲ್ಲಂಘನೆ ಹೆಸರಿನಲ್ಲಿ ಅಂದು ಡಿಸಿ ಬೈದು ಬಸ್ಸಿನಿಂದ ಇಳಿಸಿದ್ದರು. ಆ ಹೆಣ್ಣು ಮಕ್ಕಳು ಊರಿಗೆ ಹೋಗಲು ಇರುವುದೊಂದೆ ಬಸ್ ಎಂದು ಗೋಳಿಟ್ಟಿದ್ದ ದೃಶ್ಯಗಳು ವೈರಲ್ ಆಗಿದ್ದವು.
ಈ ನಡುವೆ ಜಿಲ್ಲಾಧಿಕಾರಿಗಳು ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಎನ್ನುವ ಗಾದೆಯಂತೆ, ಬಡವರ ಮೇಲೆ ತಮ್ಮ ಕಾನೂನಿನ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಡುಪಿ ನಗರದ ಅಮೃತ್ ಗಾರ್ಡನ್‌ನಲ್ಲಿ ಶುಕ್ರವಾರ ರಾತ್ರಿ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಅವರ ಪುತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಫೋಟೊಗೆ ಫೋಸ್ ನೀಡಿದ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಸರ್ಕಾರದ ನಿಯಮಗಳಿರುವುದು ಕೇವಲ ಬಡ ಮಧ್ಯಮ ವರ್ಗದವರಿಗೆ ಮಾತ್ರವೇ, ಅಧಿಕಾರಿಗಳಿಗೆ, ಅನ್ವಯವಾಗುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ನಿಷೇಧಾಜ್ಞೆಯಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಇವೆಲ್ಲವನ್ನು ಅನುಷ್ಠಾನಕ್ಕೆ ತರಬೇಕಾದ ಜಿಲ್ಲಾಧಿಕಾರಿಯೇ ನಿಯಮ ಉಲ್ಲಂಘಿಸಿರುವುದು ಖಂಡನೀಯ ಎಂದು ಹಲವರು ಟೀಕಿಸಿದ್ದಾರೆ.