ಮುಂಬೈ : ದೇಶದಲ್ಲಿ ನಿತ್ಯ ಮೂರು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಏಕಾಏಕಿ ಏರಿದ ಕೊರೊನಾ ಸೋಂಕಿನಿಂದ ವೈದ್ಯಕೀಯ ಸೌಲಭ್ಯಗಳ ಕೊರತೆ ಸೃಷ್ಟಿಯಾಗಿದೆ.
ಸಮಯಕ್ಕೆ ಸಿಗದ ಆಕ್ಸಿಜನ್ ಮತ್ತು ರೆಮ್ಡೆಸಿವಿರ್‌ನಿಂದಾಗಿ ಎಷ್ಟೊ ಮಂದಿ ಪ್ರತಿನಿತ್ಯ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ತನ್ನ ಸ್ವಂತ ಕಾರವೊಂದನ್ನು ಮಾರಿ ಬಡ ರೋಗಿಗಳಿಗೆ ಆಕ್ಸಿಜನ್ ಕೊಡಿಸುವ ಮೂಲಕ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಆಕ್ಸಿಜನ್ ಮ್ಯಾನ್ ಎಂದು ಖ್ಯಾತರಾಗಿದ್ದಾರೆ.
ಮುಂಬೈನ ಮಲಾಡ್ ನಿವಾಸಿ ಶಹನಾವಾಜ್ ಶೇಖ್ ಈಗ ಮುಂಬೈನಲ್ಲಿ ಆಕ್ಸಿಜನ್ ಹೀರೋ ಆಗಿ ಬದಲಾಗಿದ್ದು, 22 ಲಕ್ಷ ರೂ. ಮೌಲ್ಯದ ತಮ್ಮ ಫೋರ್ಡ್ ಎಂಡೀವರ್ ಎಸ್ಯುವಿಯನ್ನು ಮಾರಾಟ ಮಾಡಿ 160 ಆಮ್ಲಜನಕ ಸಿಲಿಂಡರ್ ಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಹನಾವಾಜ್ ಶೇಖ್ ಕೊರೊನಾ ರೋಗಿಗಳಿಗೆ ಸಹಾಯ ಮಾಡುತ್ತಿರುವುದು ಇದೇ ಮೊದಲಲ್ಲ, ಕಳೆದ ವರ್ಷವೂ ತಂಡವೊಂದನ್ನು ಕಟ್ಟಿಕೊಂಡು ಸೋಂಕಿತರ ಸಂಕಷ್ಟಗಳಿಗೆ ನೆರವಾಗುವ ಪ್ರಯತ್ನ ಮಾಡಿದ್ದರು.
ಕಳೆದ ವರ್ಷ ಸ್ನೇಹಿತನ ಹೆಂಡತಿ ಆಕ್ಸಿಜನ್ ಕೊರತೆಯಿಂದ ಆಟೋದಲ್ಲಿ ಸಾವನ್ನಪ್ಪಿದರು ಇದಾದ ಬಳಿಕ ಶಹನಾವಾಜ್ ಶೇಖ್ ಹೀಗೆ ಕೊರೊನಾ ಸೋಂಕಿತ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ರೋಗಿಗಳಿಗೆ ಸಹಾಯ ಮಾಡಲು ಕಂಟ್ರೋಲ್ ರೂಂ ವೊಂದನ್ನು ಮಾಡಿಕೊಂಡಿರುವ ಇವರು, ತನ್ನ ಸ್ನೇಹಿತರೊಂದಿಗೆ ಆಕ್ಸಿಜನ್ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಈ ತಂಡ 4000 ಕ್ಕೂ ಅಧಿಕ ಮಂದಿಗೆ ಸಹಾಯ ಮಾಡಿದೆ.