ಬೆಂಗಳೂರು : ಮೇ 1 ರಿಂದ ಮೂರನೇ ಹಂತದಲ್ಲಿ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಲಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಒಂದು ಕೋಟಿ ಲಸಿಕೆ ಖರೀದಿ ಮಾಡಲು ತಿರ್ಮಾನಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದ್ದು ಮೇ 1 ರಿಂದ 18ವರ್ಷ ಮೇಲ್ಪಟ್ಟ ಎಲ್ಲರಗೂ ರಾಜ್ಯ ಸರ್ಕಾರ ಕೊರೊನಾ ಲಸಿಕೆ ನೀಡಲಿದೆ.

ಕಳೆದ ಮೂರು ದಿನಗಳ ಹಿಂದೆ ಮಹತ್ವದ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಮೇ 1ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಚಾಲನೆ ನೀಡುವಂತೆ ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವಂತೆ ಸೂಚಿಸಿದ್ದರು.
ಕೊರೊನಾ ಕೊರತೆ ನೀಗಿಸಲು ಹೊಸ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ 50% ಮಾತ್ರ ಲಸಿಕೆ ಪೂರೈಕೆ ಮಾಡಲಿದ್ದು ಬಾಕಿ 50% ಲಸಿಕೆ ರಾಜ್ಯ ಸರ್ಕಾರಗಳು ವ್ಯಾಕ್ಸಿನ್ ಉತ್ಪಾದನಾ ಕಂಪನಿಗಳಿಂದ ನೇರ ಖರೀದಿ ಮಾಡಲು ಅವಕಾಶ ನೀಡಿತ್ತು. ಅಲ್ಲದೇ ಮೇ1 ರಿಂದ ದೇಶದ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಅವಕಾಶ ನೀಡಿದ್ದು ಬೆಲೆಗಳ ಪಾರದರ್ಶಕವಾಗಿರಬೇಕು ಎನ್ನುವ ಷರತ್ತು ವಿಧಿಸಲಾಗಿದೆ.

ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಕೇಂದ್ರ ಆರೋಗ್ಯ ಇಲಾಖೆ ಜೊತೆಗೆ ಚರ್ಚಿಸಿದ ಕೋವಿಶೀಲ್ಡ್ ಲಸಿಕಾ ಉತ್ಪಾದಕಾ ಸಂಸ್ಥೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ರಾಜ್ಯ ಸರ್ಕಾರಗಳಿಗೆ ಡೋಸ್ ಒಂದಕ್ಕೆ ₹400 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹600 ದರ ನಿಗದಿ ಮಾಡಿದೆ.