ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿರುವ ಹಿನ್ನೆಲೆ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನ ಕೈಗೊಂಡಿದೆ. ಇಂದು ದಿಢೀರ್ ಮಾರ್ಗಸೂಚಿ ಪ್ರಕಟಿಸಿರುವ ಸರ್ಕಾರ, ಅಗತ್ಯ ಸೇವೆಗಳನ್ನ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಿದೆ. ಈ ಹಿಂದೆ ವಾರಂತ್ಯದಲ್ಲಿ ಮಾತ್ರ ಲಾಕ್‍ಡೌನ್ ಮಾಡೋದಾಗಿ ಸರ್ಕಾರ ಹೇಳಿತ್ತು. ಉಳಿದಂತೆ ಮೇ 4ರವರೆಗೆ ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ನೈಟ್ ಕಫ್ರ್ಯೂ ಇರಲಿದೆ ಎಂದು ಹೇಳಿತ್ತು.

ಸರ್ಕಾರ ಮಾರ್ಗಸೂಚಿ ಹೊರಡಿಸುತ್ತಿದ್ದಂತೆ ಫೀಲ್ಡಿಗಿಳಿದ ಪೊಲೀಸರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಲು ಮುಂದಾದರು. ಆದ್ರೆ ಸಂಜೆವರೆಗೂ ವ್ಯಾಪಾರ ಮಾಡಲು ಬಂದಿದ್ದ ವ್ಯಾಪಾರಗಳು ಸರ್ಕಾರಕ್ಕೆ ಹಿಡಿಶಾಪ ಹಾಕುವ ದೃಶ್ಯಗಳು ಕಂಡು ಬರುತ್ತಿವೆ. ಹಾಗಾದ್ರೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? ಅನ್ನೋದರ ಮಾಹಿತಿ ಇಲ್ಲಿದೆ.

ಏನಿರುತ್ತೆ?
- ದಿನಸಿ, ಹಾಲು, ಹಣ್ಣು, ತರಕಾರಿ, ದಿನ ಪತ್ರಿಕೆ
- ಮೆಡಿಕಲ್ ಶಾಪ್, ವೈದ್ಯಕೀಯ ಸೇವೆ
- ಬ್ಯಾಂಕ್, ವಿಮೆ ಕಂಪನಿ, ಎಟಿಎಂ ಸೇವೆ
- ಹೂವಿನ ಅಂಗಡಿ, ದಾಸ್ತಾನು ಕೇಂದ್ರಗಳು, ಕೋಲ್ಡ್ ಸ್ಟೋರೇಜ್
- ಹೋಟೆಲ್, ರೆಸ್ಟೋರೆಂಟ್ ಮತ್ತು ಬಾರ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ
- ಹೊರಗಿನಿಂದ ಬಂದ ಜನರಿಗೆ ಮಾತ್ರ ಹೋಟೆಲ್, ಲಾಡ್ಜಿಂಗ್ ವ್ಯವಸ್ಥೆ
- ಪತ್ರಿಕೆ, ಇಲೆಕ್ಟ್ರಾನಿಕ್ ಮೀಡಿಯಾ, ಇ-ಕಾಮರ್ಸ್, ಖಾಸಗಿ ಸೆಕ್ಯೂರಿಟಿ, ಬ್ಯೂಟಿ ಪಾರ್ಲರ್, ಹೇರ್ ಕಟಿಂಗ್ ತೆರೆಯಲು ಅನುಮತಿ
- ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳು ತೆರೆಯಬಹುದು.

ಈ ಮೇಲ್ಕಂಡ ಸೇವೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಬಂದ್ ಮಾಡಲಾಗಿದೆ. ಆದ್ರೆ ಹಾಫ್ ಲಾಕ್‍ಡೌನ್ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಲಾಕ್‍ಡೌನ್ ಮಾಡಲ್ಲ ಅಂತ ಹೇಳಿದ್ದ ಸರ್ಕಾರ ಈ ರೀತಿಯ ರೂಲ್ಸ್ ತಂದಿದ್ದು ಎಷ್ಟು ಸರಿ ಎಂದು ವ್ಯಾಪಾರಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.