ನವದೆಹಲಿ : ಕೊರೊನಾ ವೈರಸ್ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡಲಾಗುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಸೋಮವಾರ ರಾತ್ರಿಯಿಂದ ಮುಂದಿನ ಸೋಮವಾರ ಬೆಳಿಗ್ಗೆವರೆಗೂ ಲಾಕ್ಡೌನ್ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಜೊತೆಗೆ ಸಭೆ ಒಂದು ಗಂಟೆಗೂ ಅಧಿಕ ಹೊತ್ತು ಸಭೆ ನಡೆಸಿದ ಬಳಿಕ ಅರವಿಂದ್ ಕೇಜ್ರಿವಾಲ್ ಆರು ದಿನಗಳ ಲಾಕ್ಡೌನ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ಈಗಾಗಲೇ ವಾರಾಂತ್ಯದ ಕರ್ಫ್ಯೂ ಮತ್ತು ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ರಾತ್ರಿ ಕರ್ಫ್ಯೂ ಏಪ್ರಿಲ್ 30 ರವರೆಗೆ ಜಾರಿಯಲ್ಲಿರಲಿದ್ದು, ಕೊರೊನಾ ಚೈನ್ ಲಿಂಕ್ ಬ್ರೇಕ್ ಮಾಡಲು ಲಾಕ್ಡೌನ್ ಮಾಡಲು ನಿರ್ಧರಿಸಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ.
ಲಾಕ್ಡೌನ್ ಘೋಷಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರ ಏಕಾಂಗಿಯಾಗಿ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಜನರ ಸಹಕಾರ ಬೇಕೆ ಬೇಕು ಈ ಹಿನ್ನಲೆಯಲ್ಲಿ ಲಾಕ್ಡೌನ್ ಮಾಡಲಾಗುತ್ತಿದ್ದು ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದರು.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಬೆಡ್ ಗಳ ಕೊರತೆ ಸೃಷ್ಟಿಯಾಗಿದೆ ಸೋಂಕಿತರ ಸಂಖ್ಯೆ ಹೆಚ್ಚಾದ್ದರೆ ವ್ಯವಸ್ಥೆಗಳು ಕಡಿಮೆಯಾಗುವುದು ಸಹಜ ದೆಹಲಿಯಲ್ಲಿ ಸದ್ಯ ನೂರಕ್ಕೂ ಕಡಿಮೆ ಐಸಿಯು ಬೆಡ್ಗಳಿದೆ, ಔಷಧಿ ಕಡಿಮೆಯಾಗಿದೆ, ಇದನ್ನು ನಾವು ನಿಮ್ಮಗೆ ಹೆದರಿಸಲು ಹೇಳುತ್ತಿಲ್ಲ ಆದರೆ ಜನರಿಗೆ ಪರಿಸ್ಥಿತಿ ಅರ್ಥ ಆಗಬೇಕಿದೆ ಕೇಂದ್ರ ಸರ್ಕಾರಕ್ಕೆ ಬೆಡ್ ಮತ್ತು ಔಷಧಿಗಳಿಗಾಗಿ ಈಗಾಗಲೇ ಮನವಿ ಮಾಡಿದೆ ಎಂದರು.
ಲಾಕ್ಡೌನ್ ಅವಧಿಯಲ್ಲಿ ಮದುವೆಗಳಿಗೆ ಅವಕಾಶ ನೀಡಿದ್ದು ಕೇವಲ 50 ಮಂದಿಗೆ ಪಾಸ್ ಸಹಿತ ಭಾಗಿಯಾಗಲು ಅವಕಾಶ ನೀಡಿದೆ. ಅಲ್ಲದೇ ವಲಸೆ ಕಾರ್ಮಿಕರು ದೆಹಲಿ ತೊರೆಯದಂತೆ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದು ಎಲ್ಲರ ಕಾಳಜಿ ಸರ್ಕಾರ ವಹಿಸಲಿದೆ ಎಂದು ಅಭಯ ನೀಡಿದ್ದಾರೆ.