ನವದೆಹಲಿ : ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಮತ್ತು ರೈಲುಗಳಲ್ಲಿ ಸಂಚರಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ₹500 ದಂಡ ವಿಧಿಸುವುದಾಗಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ದೇಶದ್ಯಾಂತ ಕೊರೊನಾ ಸೋಂಕು ಎರಡನೇ ಅಲೆಯಲ್ಲಿ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಶಿಷ್ಟಾಚಾರದ ಪ್ರಕಾರ ರೈಲ್ವೆ ಇಲಾಖೆ ಈ ಆದೇಶ ಹೊರಡಿಸಿದೆ.

ಕೊರೊನಾ ಸೋಂಕಿನ ಭೀತಿಯ ನಡುವೆ ದೇಶದ್ಯಾಂತ ರೈಲುಗಳ ಸಂಚಾರ ಮುಂದುವರಿದಿದೆ. ರೈಲು ನಿಲ್ದಾಣಗಳಲ್ಲಿ ಮತ್ತು ರೈಲಿನೊಳಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದು ಅದರ ಭಾಗವಾಗಿ ಈ ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದರೆ ರೈಲ್ವೆ ಆವರಣದ ಶುಚಿತ್ವಕ್ಕೆ ಧಕ್ಕೆ ತರುವ ಚಟುವಟಿಕೆಗಾಗಿ ವಿಧಿಸುವ ದಂಡ ಕಾಯ್ದೆ 2012ರ ಅನ್ವಯ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ರೈಲು ಮತ್ತು ರೈಲ್ವೆ ಆವರಣದಲ್ಲಿ ಉಗುಳುವವರಿಗೂ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ