ಬೆಂಗಳೂರು : ಉಪ ಚುನಾವಣೆಯ ಮತ ಬೇಟೆಯಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರಿಗೆ ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದೆ. ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಎರಡನೇ ಬಾರಿಗೆ ಸಿಎಂ ಬಿಎಸ್ ವೈ ಸೋಂಕಿಗೆ ತುತ್ತಾಗಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸಿ ವೈಯಕ್ತಿಕ ಸ್ವಾರ್ಥಕ್ಕಾಗಿ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ರಾಜಕಾರಣಿಗಳ ವಿರುದ್ಧ ಜನರು ಹಿಡಿ ಶಾಪ ಹಾಕುವಂತಾಗಿದೆ.
ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ
— B.S. Yediyurappa (@BSYBJP) April 16, 2021
ಎರಡನೇ ಬಾರಿಗೆ ಸೋಂಕು ಅಂಟಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಳೆದ ಒಂದು ವಾರದಿಂದ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಎಪ್ರೀಲ್ 12 ರಂದು ಅವರು ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಮತಯಾಚನೆ ಮಾಡಿದ್ದರು.
ಮುಖ್ಯಮಂತ್ರಿಗಳ ರ್ಯಾಲಿ ಬೆನ್ನಲೆ ಅದರಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್, ಶಾಸಕ ರಾಜೂಗೌಡ, ಪ್ರೀತಂಗೌಡ ಹಾಗೂ ಡಿಸಿಎಂ ಗೋವಿಂದ್ ಕಾರಜೋಳ ಅವರಿಗೆ ಸೋಂಕು ತಗುಲಿತ್ತು. ಇವರ ನೇರ ಸಂಪರ್ಕದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇದ್ಯಾವುದನ್ನು ಲೆಕ್ಕಸದೇ ಬಸವ ಕಲ್ಯಾಣ ಮತ್ತು ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಮುಂದುವರಿಸಿದ್ದರು.

ಕಳೆದ ಸೋಮವಾರವೇ ಬಿ.ಎಸ್ ಯಡಿಯೂರಪ್ಪ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಕೇವಲ ಮಾತ್ರೆಗಳನ್ನು ತೆಗೆದುಕೊಂಡಿದ್ದ ಬಿಎಸ್ ವೈ, ಜ್ವರವನ್ನು ನಿರ್ಲಕ್ಷ್ಯಿಸಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇಷ್ಟು ಮಾತ್ರವಲ್ಲದೇ ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದರು.
ಬಿಎಸ್ ವೈಗೆ ಎರಡನೇ ಬಾರಿ ಸೋಂಕು ತಗುಲಿದ್ದು ಈಗ ಅವರ ಪ್ರಾಥಮಿಕ ಸಂಪರ್ಕದಲ್ಲಿ ಸಚಿವರಾದ ಡಾ.ಸುಧಾಕರ್, ಲಕ್ಷ್ಮಣ ಸವದಿ, ಶ್ರೀರಾಮುಲು, ಜಗದೀಶ ಶೆಟ್ಟರ್ ಸೇರಿ ಹಲವು ಶಾಸಕರಿದ್ದರೆ ಇವರೆಲ್ಲರು ಈಗ ಕ್ವಾರಂಟೈನ್ ಆಗುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ @BSYBJP ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ.
— Karnataka Congress (@INCKarnataka) April 16, 2021
ಈ ಹಿಂದೆ ಕೊರೋನಾ ಸೋಂಕಿತರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದರು.
ಇಂತರ ಸರ್ಕಾರದಿಂದ ಸೋಂಕು ನಿಯಂತ್ರಣ ಸಾಧ್ಯವೇ?

ಚುನಾವಣೆ ಅನ್ನೊ ವೈಯುಕ್ತಿಕ ಸ್ವಾರ್ಥಕ್ಕೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರುವ ಇವರು ಜನರಿಗೆ ಬುದ್ದಿವಾದ ಹೇಳಲು ಮುಂದಾಗಿದ್ದಾರೆ. ಕಠಿಣ ನಿಯಮಗಳು, ಲಾಕ್ಡೌನ್ ಭೂತ ತೋರಿಸುತಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಸ್ತರಿಸಲು ಚಿಂತನೆ ನಡೆದಿದೆ. ಬೆಂಗಳೂರು ನಗರದಲ್ಲಿ ವಿಕೇಂಡ್ ಕರ್ಫ್ಯೂ ಜಾರಿದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಬೆಂಗಳೂರು ಅಪಾಯದ ಮಟ್ಟ ಮೀರಿದೆ, ಹಲವು ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸುತ್ತಿದೆ. ಕೂಡಲೇ ಮುನ್ನೆಚ್ಚರಿಕೆ ವಹಿಸಬೇಕಿದ್ದ ಸರ್ಕಾರ ಉಪ ಚುನಾವಣೆ ಕಸರತ್ತು ಮುಗಿದು ಬಿಡಲಿ ಎಂದು ಕಾಯುತ್ತಿದೆ.
ಬಿಎಸ್ ವೈಗೆ ಸೋಂಕು ತಗುಲುತ್ತಿದ್ದಂತೆ ಕಾಂಗ್ರೆಸ್ ರಾಜಕೀಯ ಮಾಡಿದೆ. ಟ್ವಿಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಜ್ವರದ ನಡುವೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದು ಮುಖ್ಯಮಂತ್ರಿಗಳ ಬೇಜವಬ್ದಾರಿತನ ಎಂದು ಟೀಕಿಸಿದೆ. ಆದರೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯಷ್ಟೇ ಸಮ ಪ್ರಮಾಣದ ತಪ್ಪುಗಳು ಕಾಂಗ್ರೆಸ್ ನದು ಇದೆ ಎನ್ನುವುದು ಕಾಂಗ್ರೆಸ್ ಮರೆತಂತಿದೆ. ಕಾಂಗ್ರೆಸ್ ಅಧ್ಯಕ್ಷರು ಕೊರೊನಾ ಸಂಕಷ್ಟದಲ್ಲೆ ಕಾರ್ಯಕರ್ತರನ್ನು ಒಗ್ಗೂಡಿಸಿ ಅಧಿಕಾರ ಸ್ವೀಕಾರ ಮಾಡಿದ್ದರು, ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪುತ್ರಿಯ ಅದ್ಧೂರಿ ವಿವಾಹ ಮಾಡಿದ್ದು ನಾವು ನೆನೆಪಿಸಿಕೊಳ್ಳಬಹುದು.
West Bengal: BJP National President JP Nadda holds a roadshow in Bardhaman. #WestBengalElections2021 pic.twitter.com/j90M0eo0Qf
— ANI (@ANI) April 16, 2021
ಈಗ ದೇಶದಲ್ಲಿ ಕೊರೊನಾ ನಿತ್ಯ ಎರಡು ಲಕ್ಷ ಮಂದಿಯ ಮೈ ಹೊಕ್ಕುತ್ತಿದೆ, ನಿತ್ಯ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿ ನಿಯಮಗಳನ್ನು ಗಾಳಿಗೆ ತೂರುವ ಈ ರಾಜಕೀಯ ನಾಯಕರಿಗೆ ಜನರಿಗೆ ನಿಯಮಗಳನ್ನು ಪಾಲಿಸಿ ಎನ್ನುವ ನೈತಿಕ ಹಕ್ಕಿದಿಯೇ..? ಇವರು ಜನ ನಾಯಕರಾಗಲು ಅರ್ಹರೇ.?
ಕೇಂದ್ರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಎಲ್ಲ ರಾಜ್ಯಗಳ ಸಿಎಂಗಳ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳ ಜಾರಿಯಾಗಬೇಕು ಮಾಸ್ಕ್ ಕಡ್ಡಾಯವಾಗಿ ಧರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ಸೂಚಿಸಿ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸಭೆಯ ಮರು ದಿನ ಪಶ್ಚಿಮ ಬಂಗಾಳದಲ್ಲಿ ಎರಡು ಲಕ್ಷ ಜನರನ್ನೂ ಒಗ್ಗೂಡಿಸಿ ಚುನಾವಣಾ ರ್ಯಾಲಿ ನಡೆಸಿದ್ದರು. ಇನ್ನು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ ಬೇಟೆಯ ಭರಾಟೆ ಮುಂದುವರಿದಿದ್ದು ಇಂದೂ ಸಹ ಬೃಹತ್ ರೋ ಶೋ ನಡೆಸಿದ್ದಾರೆ.