ನವದೆಹಲಿ : ನಾವು ದಲಿತರ ಪರ ಅಂತ ಮಾರುದ್ದ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಲಿತರ ಬೆನ್ನಿಗೆ ಚೂರಿ ಇರಿಯುತ್ತಿದೆ. ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್‌ಗೆ ಕೊಕ್ಕೆ ಹಾಕುತ್ತಿದ್ದು, ದಲಿತರ ಮೇಲೆ ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಸುಳ್ಳು ಕೇಸುಗಳನ್ನು ದಾಖಲಿಸುತ್ತಿವೆ ಎಂದು ಕಾಂಗ್ರೆಸ್ ಯುವ ನಾಯಕ ನೀರಜ್ ಕುಂದನ್ ಆರೋಪಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂದನ್, ದಲಿತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ಮೋದಿ ಸರ್ಕಾರ ಮಾಡ್ತಿದೆ. ಇದಕ್ಕಾಗಿ ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್‌ಗೆ ಕೊಕ್ಕೆ ಹಾಕಿದೆ ಎಂದರು.

ದಲಿತ ವಿದ್ಯಾರ್ಥಿಗಳ ಸ್ಕಾಲರ್ಶಿಪ್‌ಗಾಗಿ 2013-14ರಲ್ಲಿ ಕಾಂಗ್ರೆಸ್ ಸರ್ಕಾರ 882 ಕೋಟಿ ಬಿಡುಗಡೆ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ 2016-17ರಲ್ಲಿ 506 ಕೋಟಿಗೆ ಇಳಿಕೆ ಮಾಡಿತ್ತು, ಮುಂದೆ 2017ರಲ್ಲಿ 62 ಕೋಟಿಗೆ, 2018ರಲ್ಲಿ 115 ಕೋಟಿಗೆ ಮತ್ತು 2019ರಲ್ಲಿ 365 ಕೋಟಿ ರೂ.ಗೆ ಇಳಿಕೆ ಮಾಡಿ ದಲಿತ ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರ ವಂಚನೆ ಮಾಡಿದೆ ಎಂದರು.
ಇನ್ನೂ ಅಂಚೆ, ರೈಲ್ವೆ, ರಕ್ಷಣೆ, ಕಂದಾಯ ಸೇರಿ ಸರ್ಕಾರದ ಹಲವು ಇಲಾಖೆಯಲ್ಲಿ ಮೀಸಲಾತಿ ಅಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ ಮೋಸ ಮಾಡುತ್ತಿದ್ದು ಶೇ 50ರಷ್ಟು ಹುದ್ದೆಗಳು ಭರ್ತಿ ಮಾಡದೆ ಖಾಲಿ ಉಳಿಸಿಕೊಂಡಿದ್ದಾರೆ ಎಂದು ಅವರು ಅಂಕಿ ಅಂಶಗಳ ಸಮೇತ ವಾಗ್ದಾಳಿ ನಡೆಸಿದರು.

ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ರಾಷ್ಟ್ರೀಯ ಕ್ರೈಂ ಬ್ಯೂರೋನ 2019ರ ಅಂಕಿ ಅಂಶದ ಪ್ರಕಾರ ದೇಶದಲ್ಲಿ ದಲಿತರ ಮೇಲೆ 45,935 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.3ರಷ್ಟು ಹೆಚ್ಚಾಗಿದ್ದು ಉತ್ತರ ಪ್ರದೇಶದಲ್ಲಿ ಅತ್ಯಧಿಕ ಅಪರಾಧ ಪ್ರಕರಣಗಳಿ ದಲಿತರ ಮೇಲಿದೆ.

ಸಿಎಂ ಯೋಗಿ ಆಡಳಿತ ರಾಜ್ಯದಲ್ಲಿ 11,829 ದಲಿತರ ಮೇಲೆ ದೌರ್ಜನ್ಯದ ಕೇಸ್‌ಗಳಿವೆ. ಇದು ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇ. 25.8 ರಷ್ಟಾಗಿದ್ದು, ಬಿಹಾರದಲ್ಲಿ ಶೇ.14.2 ಮತ್ತು ಮಧ್ಯ ಪ್ರದೇಶದಲ್ಲಿ ಶೇ.11.5ರಷ್ಟು ಕೇಸ್‌ಗಳು ದಾಖಲಾಗಿವೆ.

ಗುಜರಾತಿನಲ್ಲಿ ದಲಿತ ಸೋದರರ ಚರ್ಮ ಸುಲಿದಿದ್ದು, ಹೈದರಾಬಾದ್‌ನ ರೋಹಿತ್ ವೇಮುಲಾ ಸಾವು, ಸಹರಾಪುರ, ಉತ್ತರ ಪ್ರದೇಶದಲ್ಲಿ ದಲಿತರ ಮನೆಗಳಿಗೆ ಬೆಂಕಿ ಇಟ್ಟಿದ್ದು. ಹತ್ರಾಸ್ ಕೇಸ್ ಇವೆಲ್ಲ ನೆನಪಾದ್ರೆ ಇಂದು ಸಹ ಎದೆ ಝಲ್ ಅನ್ನುತ್ತೆ. ದಲಿತ ವಿರೋಧಿ ಸಿಎಂ ಆದಿತ್ಯನಾಥ್ ಅನ್ನೊದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ, ಸಿಎಂ ಯೋಗಿಯನ್ನ ಭೇಟಿ ಮಾಡೋಕು ಮುನ್ನ ದಲಿತರಿಗೆ ಸಾಬೂನಿನಿಂದ ಸ್ನಾನ ಮಾಡಿಸ್ತಾರೆ. ಇನ್ನೂ ಸಿಎಂ ಯಡಿಯೂರಪ್ಪ ಹೋಟೆಲ್‌ನಿಂದ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡ್ತಾರೆ ಅಂತಾ ಕಾಂಗ್ರೆಸ್ ಕಿಡಿ ಕಾರಿದ್ದಾರೆ.