ಮೈಸೂರು ಅಂದಾಕ್ಷಣ ನೆನಪಾಗೋದು ಜಂಬೂ ಸವಾರಿ.. ಇದರ ಜೊತೆ ಅರಮನೆ, ಚಾಮುಂಡಿ ಬೆಟ್ಟ, ಒಡೆಯರ್ ಆಡಳಿತ, ಟಿಪ್ಪು ಸುಲ್ತಾನ್ ಸಹ ಕಣ್ಮುಂದೆ ಬರ್ತಾರೆ. ರಾಜ ಮನೆತನದ ಜೊತೆ ಸರ್ ಎಂ ವಿಶ್ವೇಶರಯ್ಯ, ಮಿರ್ಜಾ ಇಸ್ಮಾಯಿಲ್ ನೀಡಿದ ಕೊಡುಗೆಗೆಳು ಸಹ ನೆನಪಾಗುತ್ತೆ.. ಮೈಸೂರು ಇತಿಹಾಸದಲ್ಲಿ ತಮ್ಮದೇ ಚಾಪು ಮೂಡಿಸಿದ್ದು ಈ ಇಬ್ಬರು ಗಣ್ಯರು. ಅವರ ಕೆಲಸಗಳು ಇಂದು ನಮ್ಮ ಮುಂದಿವೆ. ಮುಂದೆಯೂ ಇರುತ್ತೆವೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಬಗ್ಗೆ ಹೇಳೋಕೆ ಹೋದ್ರೆ ದಿನಗಳೇ ಸಾಲದು. ಸಂಸ್ಕೃತ- ಕನ್ನಡ ಪ್ರೇಮಿ, ಅಭಿವೃದ್ಧಿಯ ಹರಿಕಾರ, ಹೊಸತನ ಕನಸುಗಾರ ಮಾನವೀಯ ಜೀವಿ ಮಿರ್ಜಾ ಇಸ್ಮಾಯಿಲ್

ಮಿರ್ಜಾ ಇಸ್ಮಾಯಿಲ್ ಹೆಚ್‍ಎಎಲ್ ಗೆ ಫೌಂಡೇಶನ್ ಹಾಕಿದವರು, ಬೆಂಗಳೂರಿನ ಟೌನ್ ಹಾಲ್ ಡಿಸೈನ್ ಮಾಡಿದವರು, ಮಂಡ್ಯದ ಸಕ್ಕರೆ ಕಾರ್ಖಾನೆ ಕಟ್ಟಿದವ್ರು. ಗ್ರಾಮೀಣ ಭಾಗಗಳಿಗೂ ಕರೆಂಟ್ ನೀಡಿದ ಬೆಳಕಿನ ಚೇತನ ಮಿರ್ಜಾ ಇಸ್ಮಾಯಿಲ್. ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ ಪೂರ್ಣ ಹೆಸರು ಸರ್ ಆಮೀನ್ ಉಲ್ ಮುಲ್ಕ್ ಮಿರ್ಜಾ ಮೊಹಮದ್ ಇಸ್ಮಾಯಿಲ್… ಮೂಲತಃ ಪರ್ಷಿಯಾದವರು. ಇವರ ಅಜ್ಜ ಅಲಿಯಾಸ್ಕರ್ ವ್ಯಾಪಾರ ಮಾಡತ್ತಾ ಬಂದು ಬೆಂಗಳೂರಿನಲ್ಲಿ ನೆಲೆ ಕಂಡಿಕೊಂಡಿದ್ದರು. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ಬಳಿಯಲ್ಲಿರೋ ಪ್ಯಾರಾಲಲ್ ರಸ್ತೆಯನ್ನ ಅಲಿಯಾಸ್ಕರ್ ರಸ್ತೆ ಅಂತ ಕರೀತಾರೆ. ಅದು ಮಿರ್ಜಾ ಇಸ್ಮಾಯಿಲ್ ಅವರ ಅಜ್ಜನ ಹೆಸರು.. ಅಲಿಯಾಸ್ಕರ್ ಅವರ ಮಗ ಆಗಾ ಖಾನ್ ಅವರ ಪುತ್ರನಾಗಿ ಹುಟ್ಟಿದವರು ಮಿರ್ಜಾ ಇಸ್ಮಾಯಿಲ್
1883 ಅಕ್ಟೋಬರ್ 24 ರಂದು ಮಿರ್ಜಾ ಇಸ್ಮಾಯಿಲ್ ಅವರ ಜನನ ಆಗುತ್ತೆ. ಶಿಕ್ಷಣಕ್ಕಾಗಿ ಬೆಂಗಳೂರಿನ ಸೇಂಟ್ ಫ್ಯಾಟ್ರಿಕ್ ಸ್ಕೂಲ್ ಸೇರಿಕೊಳ್ಳುತ್ತಾರೆ. ಇದೇ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣಕ್ಕಾಗಿ ವಿಶೇಷ ರಾಯಲ್ ಸ್ಕೂಲ್ ಸ್ಥಾಪನೆ ಆಗುತ್ತೆ. ಈ ಸ್ಕೂಲಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೊತೆಗೆ ಓದೋಕೆ ಆಯ್ಕೆಯಾದ ಬೆರಳಣಿಕೆ ವಿದ್ಯಾರ್ಥಿಗಳಲ್ಲಿ ಮಿರ್ಜಾ ಇಸ್ಮಾಯಿಲ್ ಸಹ ಒಬ್ಬರು. ಬಾಲ್ಯದಿಂದಲೂ ಮಿರ್ಜಾ ಇಸ್ಮಾಯಿಲ್ ಅವರಿಗೆ ಒಡೆಯರ್ ಜೊತೆ ಒಡನಾಟ ಇತ್ತು.

ಶಿಕ್ಷಣದ ಬಳಿಕ ಮಿರ್ಜಾ ಇಸ್ಮಾಯಿಲ್ ಅವರು 1904ರಲ್ಲಿ ಪೊಲೀಸ್ ಅಧೀಕ್ಷರಾಗಿ ಕೋಲಾರದಲ್ಲಿ ವೃತ್ತಿ ಜೀವನ ಆರಂಭಿಸುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿಯೇ ವಿಶ್ವೇಶ್ವರಯ್ಯನವರ ಮಾರ್ಗದರ್ಶನ ಇಸ್ಮಾಯಿಲ್ ಅವರಿಗೆ ಸಿಗುತ್ತೆ. ಕೋಲಾರದಲ್ಲಿ ವೃತ್ತಿ ಆರಂಭಿಸಿದ್ದ ಇಸ್ಮಾಯಿಲ್ ಅವರನ್ನ ಕರೆಸಿಕೊಳ್ಳೂವ ನಾಲ್ವಡಿ ಕೃಷ್ಣರಾಜ್ ಒಡೆಯರು ಹುಜುರ್ ಸೆಕ್ರೆಟರಿ ಹುದ್ದೆಯನ್ನ ಸೃಷ್ಟಿಸುತ್ತಾರೆ. ಅದಕ್ಕೆ ಇಸ್ಮಾಯಿಲ್ ಅವರನ್ನ ಆಯ್ಕೆ ಮಾಡಿಕೊಳ್ತಾರೆ.
ನಾಲ್ವಡಿ ಕೃಷ್ಣರಾಜ್ ಒಡೆಯರ್ ಆಡಳಿತಾವಧಿಯಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು. ಹಾಗಾಗಿ ಬ್ರಿಟಿಷರು ತಮ್ಮ ಅಧಿಕಾರಿ ಒಬ್ಬರನ್ನ ರಾಜ್ಯಗಳಿಗೆ ನೇಮಿಸುತ್ತಿದ್ದರು. ಸ್ಥಳೀಯ ಭಾಷೆಯ ಬರದ ಹಿನ್ನೆಲೆ ಬ್ರಟಿಷ್ ಅಧಿಕಾರಿ ಇಸ್ಮಾಯಿಲ್ ಅವರ ಸಹಾಯ ಪಡೆದುಕೊಳ್ಳುತ್ತಾರೆ. ಜೊತೆಗೆ ಆಡಳಿತಾತ್ಮಕ ವಿಷಯಗಳಲ್ಲಿ ಸಲಹೆ ಪಡೆಯುತ್ತಿರುತ್ತಾರೆ. 1926ರಲ್ಲಿ ಮಿರ್ಜಾ ಇಸ್ಮಾಯಿಲ್ ಅವರನ್ನ ಒಡೆಯರ್ ಅವರು ದಿವಾನರನ್ನಾಗಿ ನೇಮಿಸಿಕೊಳ್ತಾರೆ. ಇನ್ನು ವಿಶೇಷ ಅಂದ್ರೆ ವಿಶ್ವೇಶ್ವರಯ್ಯನವರೇ ಇಸ್ಮಾಯಿಲ್ ಅವರ ಹೆಸರನ್ನ ಶಿಫಾರಸ್ಸು ಮಾಡಿದ್ದರು ಎಂದು ಇತಿಹಾಸ ಹೇಳುತ್ತಾರೆ.

1926ರಿಂದ ಮಿರ್ಜಾ ಇಸ್ಮಾಯಿಲ್ ಅವರ ಆಡಳಿಯ ಶಕೆ ಆರಂಭಗೊಳ್ಳುತ್ತದೆ. ನಾಲ್ವಡಿ ಮತ್ತು ಇಸ್ಮಾಯಿಲ್ ಅವರ ಅವಧಿಯನ್ನ ಮೈಸೂರು ಸಂಸ್ಥಾನದ ಸುವರ್ಣ ಯುವಗ ಅಂತಾನೇ ಇತಿಹಾಸಕಾರರು ಬಣ್ಣಿಸುತ್ತಾರೆ. ಕೇವಲ ಆಡಳಿತ ವಿಷಯದಲ್ಲಿ ಮಾತ್ರ ಅಲ್ಲದೇ ನಗರದ ಸ್ವಚ್ಛತೆ, ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಬೆಳಗಿನ ಜಾವ ಕುದುರೆ ಏರಿ ಹೊರಟರೆ ಇಡೀ ನಗರದ ಪ್ರದಕ್ಷಿಣೆ ಹಾಕುತ್ತಿದ್ದರು. ಪ್ರದಕ್ಷಿಣೆ ವೇಳೆ ಜನರ ಸಮಸ್ಯೆಗಳನ್ನ ಆಲಿಸಿ ಪರಿಹಾರ ಸಹ ಒದಗಿಸುತ್ತಿದ್ದರು.
ಮಿರ್ಜಾ ಇಸ್ಮಾಯಿಲ್ ಮುಸ್ಲಿಂರಾದರೂ ಕನ್ನಡ ಮತ್ತು ಸಂಸ್ಕೃತ ಭಾಷಾ ಪ್ರೇಮಿ. ಅದೇ ಕಾರಣಕ್ಕೆ ರಾಜ್ಯದೆಲ್ಲಡೆ ಕನ್ನಡ ಭಾಷೆ ಕಲಿಕೆಯನ್ನ ಕಡ್ಡಾಯಗೊಳಿಸಿದ್ದರು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ ಎಲ್ಲರನ್ನ ಸಮನಾಗಿ ಕಂಡು ಧರ್ಮ ಸಾಮರಸ್ಯ ತಂದವರು ಸರ್ ಮಿರ್ಜಾ ಇಸ್ಮಾಯಿಲ್..
15 ವರ್ಷ ದಿವಾನ್ ರಾಗಿದ್ದ ಮಿರ್ಜಾ ಇಸ್ಮಾಯಿಲ್ ದೂರದೃಷ್ಟಿಯುಳ್ಳವರಾಗಿದ್ದರು. ಹಾಗಾಗಿ ನೀರಾವರಿ, ಕೈಗಾರಿಕೆ, ಮೂಲಭೂತ ಸೌಕರ್ಯಗಳಿಗೆ ಮೊದಲ ಆಧ್ಯತೆ ನೀಡಿದ್ರು. ಮಂಡ್ಯ, ಮಳ್ಳವಳ್ಳಿ ಭಾಗದ ಒಂದು ಲಕ್ಷ ಸಾವಿರಕ್ಕೂ ಅಧಿಕ ಎಕರೆ ಕೃಷಿ ಭೂಮಿಯನ್ನ ನೀರಾವರಿಗೆ ಒಳಪಡಿಸಿದ್ದರು. ಕೆಲ ಇತಿಹಾಸಕಾರರ ಪ್ರಕಾರ ಇಸ್ಮಾಯಿಲ್ ಅವರ ಕಾಲದ ವೇಳೆ ಮೈಸೂರು ಸಂಸ್ಥಾನದಲ್ಲಿ 30 ಸಾವಿರ ಕೆರೆಗಳ ನಿರ್ಮಾಣ ಆಗಿದ್ದವು. ಬೆಂಗಳೂರಿನ ಸರ್ಕಾರಿ ಪಿಂಗಾಣಿ ಕಾರ್ಖಾನೆ, ಶಿವಮೊಗ್ಗದ ಸಕ್ಕರೆ ಫ್ಯಾಕ್ಟರಿ, ಭದ್ರಾವತಿಯ ಸಿಮೆಂಟ್ ಮತ್ತು ಕಾಗದದ ಫ್ಯಾಕ್ಟರಿ, ಬೆಂಕಿ ಪೊಟ್ಟಣ ಫ್ಯಾಕ್ಟರಿ, ಹೆಚ್‍ಎಎಲ್ ಇವೆಲ್ಲ ಇಸ್ಮಾಯಿಲ್ ಅವರ ಕೊಡುಗೆಗಳು…
ಅಂದೇ ಖಾಸಗಿ ಒಡೆತನದಲ್ಲಿದ್ದ ರೈಲ್ವೇಯನ್ನ ಸರ್ಕಾರದ ಅಧೀನಕ್ಕೆ ಒಳಪಡಿಸಿದ್ದರು, ಶಿವಮೊಗ್ಗ, ತಾಳಗುಪ್ಪ ರೈಲ್ವೇ ಲೈನ್ ಹಾಕಿಸಿದ್ದರು. ಬೆಂಗಳೂರಿನ ಕಾವೇರಿ ನೀರು ಬರೋಕೆ ಕಾರಣ ತಿಪ್ಪಗೊಂಡನಹಳ್ಳಿ ಜಲಾಶಯ, ಅದನ್ನ ಕಟ್ಟಿದವರು ಇಸ್ಮಾಯಿಲ್ ಅವರೇ. ಬೆಂಗಳೂರು, ಮೈಸೂರು ಮೆಡಿಕಲ್ ಕಾಲೇಜು, ಬೆಂಗಳೂರಿಗೆ ಮೊದಲ ಬಾರಿಗೆ ಡಬಲ್ ಸಿಟಿ ಬಸ್ ತಂದಿದ್ದು ಸಹ ಇಸ್ಮಾಯಿಲ್ ಅವರ ಸಾಧನೆ.
ಇಷ್ಟೆಲ್ಲ ಆಡಳಿತದಲ್ಲಿ ಸುಧಾರಣೆ ತಂದಿದ್ದ ಇಸ್ಮಾಯಿಲ್ ಅವರ 15 ವರ್ಷದ ದಿವಾನ್ ರಾಗಿ ಸೇವೆ ಸಲ್ಲಿಸಿದ ಹಾದಿ ಸುಗಮವಾಗಿರಲಿಲ್ಲ. ಕೆಲವೊಮ್ಮೆ ಜಾತಿ ಹೆಸರು ಪ್ರಸ್ತಾಪ ಆದಾಗ ದಿವಾನ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರಂತೆ. ಆದ್ರೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ನಮಗೆ ನೀವೇ ಬೇಕೆಂದಾಗ ಸೇವೆ ಮುಂದುವರಿಸಿದ್ರು. 1940ರಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಕಾಲವಾದ ನಂತರವೇ ಇಸ್ಮಾಯಿಲ್ ಅವರು ದಿವಾನಗಿರಿಯಿಂದ ಕೆಳಗೆ ಇಳಿಯುತ್ತಾರೆ.
ಆ ನಂತರ ಜೈಪುರದ ದಿವಾನರಾಗುತ್ತಾರೆ. ಮತ್ತೆ ಹೈದಾರಾಬಾದ್ ನಲ್ಲಿ ನಿಜಾಮರ ಸಂಸ್ಥಾನದಲ್ಲಿಯೂ ದಿವಾನ ಪಟ್ಟವನ್ನ ಅಲಂಕರಿಸಿದರು. 1954ರಲ್ಲಿ ಮೈ ಪಬ್ಲಿಕ್ ಲೈಫ್ ಅನ್ನೋ ಆತ್ಮಕಥನ ಬರೀತಾರೆ. ಪಾಕಿಸ್ತಾನ ಮತ್ತು ಭಾರತ ಇಬ್ಭಾಗವಾದಾಗ ಮೊಹಮ್ಮದ ಅಲಿ ಜಿನ್ನಾ, ಮಿರ್ಜಾ ಇಸ್ಮಾಯಿಲ್ ಅವರನ್ನ ಸಂಪರ್ಕಿಸ್ತಾರೆ. ಅಲ್ಲಿ ದೊಡ್ಡ ಹುದ್ದೆ ನೀಡ್ತಿವಿ ಬನ್ನಿ ಅಂತ ಪಾಕಿಸ್ತಾನಕ್ಕೆ ಆಹ್ವಾನಿಸುತ್ತಾರೆ. ಆದ್ರೆ ದೇಶ ವಿಭಜನೆಯನ್ನ ವಿರೋಧಿಸಿದ್ದ ಮಿರ್ಜಾ ಇಸ್ಮಾಯಿಲ್ ಆಹ್ವಾನ ತಿರಸ್ಕರಿಸ್ತಾರೆ.. ಸ್ವತಂತ್ರ ಹೋರಾಟದ ವೇಳೆ ಮಹಾತ್ಮಾ ಗಾಂಧೀಜಿ ಅವರ ತತ್ವಗಳಿಂದ ಇಸ್ಮಾಯಿಲ್ ಪ್ರೇರಿತರಾಗಿರ್ತಾರೆ.

ಬೇರೆ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ರೂ ತಮ್ಮ ಅಂತಿಮ ದಿನಗಳನ್ನ ಬೆಂಗಳೂರಿನಲ್ಲಿಯೇ ಕಳೀತಾರೆ.. 1959ರಲ್ಲಿ ಮಿರ್ಜಾ ಇಸ್ಮಾಯಿಲ್ ಕಾಲವಾಗ್ತಾರೆ.. ಇಸ್ಮಾಯಿಲ್ ಅವರು ಕಾಲವಾದರೂ ಇಂದಿಗೂ ಅವರ ಸಾಧನೆಗಳು ನಮ್ಮ ಮುಂದಿವೆ. ಇಸ್ಮಾಯಿಲ್ ಅವರ ಕಾರ್ಯ ವೈಖರಿಯನ್ನು ಎಷ್ಟೋ ಬ್ರಟಿಷ್ ಅಧಿಕಾರಿಗಳು ಕೊಂಡಾಡಿದ್ದರು.