– ಲಾಕ್ ಡೌನ್ ಆಗುತ್ತಾ ಕರುನಾಡು?
ಕಳೆದ ಒಂದು ತಿಂಗಳಿನಿಂದ ಮಹಾಮಾರಿ, ಚೀನಿ ವೈರಸ್ ಬೆಂಗಳೂರು ಸೇರಿದಂತೆ ಕರುನಾಡನ್ನ ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳುತ್ತಿದೆ. ಇಂದು ಸಹ ಬೆಂಗಳೂರಿನಲ್ಲಿ ಆರು ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈಗಾಗಲೇ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಹೀಗೆ ಮುಂದುವರಿದ್ರೆ ಸಿಲಿಕಾನ್ ಸಿಟಿಯಲ್ಲಿನ ಸೋಂಕಿತರು ನಡು ರಸ್ತೆಯಲ್ಲಿ ನಿಂತುಕೊಳ್ಳೋವ ಪರಿಸ್ಥಿತಿ ಎದುರಾಗುವ ಆತಂಕ ಎದುರಾಗಿದೆ.

ಕೊರೊನಾ ಟಾಸ್ಕ್ ಫೋರ್ಸ್ ತಂಡದ ಸದಸ್ಯರು ಸರ್ಕಾರಕ್ಕೆ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಕೆಲ ಟಾಸ್ಕ್ ಫೋರ್ಸ್ ಸದಸ್ಯರು ಬಹಿರಂಗವಾಗಿಯೇ ನೈಟ್ ಕರ್ಫ್ಯೂ ಹೇರಿಕೆ ಬಗ್ಗೆಯೇ ಅಸಮಾಧಾನ ಹೊರ ಹಾಕಿದ್ದಾರೆ. ಬೆಳಗಾವಿ, ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಉಪ ಚುನಾವಣೆ ಹಿನ್ನೆಲೆ ಲಾಕ್ ಡೌನ್ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ. ಇತ್ತ ಜನ ಸಹ ಕೊರೊನಾ ನಿಯಮ ಪಾಲಿಸದಿರೋದು ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊರೊನಾ ನಿಯಮ ಪಾಲಿಸದ ಜನರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಜನರು ಸರ್ಕಾರಕ್ಕೆ ಸಹಕಾರ ನೀಡದಿದ್ದರೆ ನಾವು ಅಸಹಾಯಕರಾಗಿ ಕಠಿಣ ನಿಯಮ ಜಾರಿಗೆ ತರಲಾಗುತ್ತದೆ. ಇದೇ ರೀತಿ ಪ್ರಕರಣಗಳ ಸಂಖ್ಯೆ ಏರಿಕೆಯಾದ್ರೆ ಲಾಕ್ ಡೌನ್ ಅನಿವಾರ್ಯ ಆಗಲಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳ ಸಂಘಟನೆಗಳ ಜೊತೆ ಸಭೆ ನಡೆಸಿದ್ದು, ಶೇ.೫೦ರಷ್ಟು ಬೆಡ್ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇಂದು ಬಸವಕಲ್ಯಾಣದಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಕೊರೊನಾ ಸಂಖ್ಯೆ ಹೆಚ್ಚಾದ್ರೆ ಯಾವುದೇ ಜಿಲ್ಲೆ ಇರಲಿ ಟಫ್ ರೂಲ್ಸ್ ತರುತ್ತೇವೆ. ಲಾಕ್ ಡೌನ್ ಮಾಡೋದು ಜನರ ಕೈಯಲ್ಲಿದೆ. ಹಾಗಾಗಿ ಜನರು ಕೊರೊನಾ ನಿಯಮ ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.